ADVERTISEMENT

ಕಳಚೆ: ಭೂ ಕುಸಿತವಾದ ಪ್ರದೇಶದಿಂದ ಹೊರ ಬರುವವರಿಗೆ ಪರಿಹಾರ

ಭೂ ಕುಸಿತವಾದ ಪ್ರದೇಶದಿಂದ ಹೊರ ಬರುವವರಿಗೆ ಪರಿಹಾರ, ಪುನರ್ವಸತಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 4:38 IST
Last Updated 2 ಜನವರಿ 2022, 4:38 IST
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆಯಲ್ಲಿ 2021ರ ಜುಲೈ 23ರಂದು ಭೂ ಕುಸಿತದಿಂದ ರಸ್ತೆಯಲ್ಲಿ ಉಂಟಾಗಿದ್ದ ಭಾರಿ ಕಂದಕ (ಸಂಗ್ರಹ ಚಿತ್ರ)
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆಯಲ್ಲಿ 2021ರ ಜುಲೈ 23ರಂದು ಭೂ ಕುಸಿತದಿಂದ ರಸ್ತೆಯಲ್ಲಿ ಉಂಟಾಗಿದ್ದ ಭಾರಿ ಕಂದಕ (ಸಂಗ್ರಹ ಚಿತ್ರ)   

ಕಾರವಾರ: ಭಾರಿ ಭೂ ಕುಸಿತದಿಂದ ನಲುಗಿರುವ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿಯ ಕಳಚೆ ಹಾಗೂ ತಳಕೇಬೈಲ್ ನಿವಾಸಿಗಳಿಗೆ ಪುನರ್ವಸತಿ ಪ್ರಕ್ರಿಯೆಗಳು ಆರಂಭವಾಗಿವೆ. ಇದರ ಮೊದಲ ಹಂತದಲ್ಲಿ, ಬಾಧಿತ ಪ್ರದೇಶದಿಂದ ಹೊರ ಬರಲು ಬಯಸಿದವರಿಂದ ಪ್ರತಿಜ್ಞಾ ಪತ್ರ ಪಡೆಯಲಾಗುತ್ತಿದೆ.

ಸಂತ್ರಸ್ತರಿಗೆ ಅರಣ್ಯ ಇಲಾಖೆಯ ಮೂಲಕ ಪರಿಹಾರ ಪುನರ್ವಸತಿಗಳನ್ನು ರೂಪಿಸುವ ಸಂಬಂಧವಾಗಿ ಡಿ.28ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಂತ್ರಸ್ತ ಗ್ರಾಮಸ್ಥರು ಪುನರ್ವಸತಿಗಳ ಕುರಿತು ಒಪ್ಪಿಗೆ ಪತ್ರ ನೀಡಲು ಸಭೆಯಲ್ಲಿ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕಳಚೆ ಭೂ ಕುಸಿತ ಪರಿಹಾರ ಪುನರ್ವಸತಿ ಹೋರಾಟ ಸಮಿತಿ ಅಡಿಯಲ್ಲಿ ಗ್ರಾಮಸ್ಥರು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಡಿ.30ರಂದು ಸಭೆ ಸೇರಿದ್ದರು.

ಅದರಂತೆ ಪ್ರತಿ ಕುಟುಂಬದ ಸದಸ್ಯರು ಅಂದರೆ ಗಂಡ, ಹೆಂಡತಿ, 18 ವರ್ಷ ಮೇಲಿನ ಮಕ್ಕಳು ಹಾಗೂ ತಂದೆ/ ತಾಯಿ ಜೀವಂತವಾಗಿದ್ದು, ಅವರ ವಿವಾಹಿತ ಹೆಣ್ಣುಮಕ್ಕಳ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್ ಸಂಖ್ಯೆಗಳನ್ನು ಸಮಿತಿಯ ಸದಸ್ಯರಿಗೆ ಜ.5ರ ಮೊದಲು ನೀಡಲು ತಿಳಿಸಲಾಗಿದೆ. ಪರಿಹಾರ ಪಡೆಯಲು ಬಯಸುವವರು ಪ್ರತಿಜ್ಞಾ ಪತ್ರದಲ್ಲಿ ಸಹಿ ಮಾಡಬೇಕು ಎಂದು ಪ್ರಮುಖರು ತಿಳಿಸಿದ್ದಾರೆ.

ADVERTISEMENT

ಪ್ರತಿಜ್ಞಾ ಪತ್ರದ ಸಾರಾಂಶ:

‘ಭೂ ಕುಸಿತದಿಂದಾಗಿ ಅತ್ಯುತ್ತಮ ತೋಟಗಾರಿಕಾ ಪ್ರದೇಶಗಳು, ಮನೆ, ಕೊಟ್ಟಿಗೆ, ಇತರ ಕಟ್ಟಡಗಳು ನಾಶವಾಗಿವೆ. ಇಲ್ಲಿ ಉಳಿಯಲು, ಕೃಷಿ ಮಾಡಲು ಯೋಗ್ಯವಾಗಿಲ್ಲ. ಆದ್ದರಿಂದ ನಾವು ಸರ್ಕಾರದ ಯಾವುದೇ ಇಲಾಖೆಯಿಂದ ಜಮೀನು, ಮನೆ, ಕೊಟ್ಟಿಗೆ, ಇತರ ಕಟ್ಟಡಗಳಿಗೆ ಸೂಕ್ತ ಪರಿಹಾರ, ಕೃಷಿಯೋಗ್ಯ ಜಮೀನು ನೀಡಿ ಪುನರ್ವ್ಯಸ್ಥೆ ಕಲ್ಪಿಸಿದರೆ ನಮ್ಮ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಗೆಯಿದೆ.’

‘ಪರಿಹಾರ, ‍ಪುನರ್‌ ವ್ಯವಸ್ಥೆಯು ತೃಪ್ತಿದಾಯಕ ಆಗಿರದಿದ್ದರೆ ಈ ಪ್ರತಿಜ್ಞಾ ಪತ್ರವನ್ನು ಹಿಂಪಡೆಯುವ ಅಥವಾ ಮೇಲ್ಮನವಿ ಸಲ್ಲಿಸುವ ಅಧಿಕಾರ ಉಳಿಸಿಕೊಂಡಿದ್ದೇವೆ. ಯಾರ ಒತ್ತಡಕ್ಕೂ ಒಳಗಾಗದೇ ಈ ಪ್ರತಿಜ್ಞಾ ಪತ್ರವನ್ನು ಬರೆಯಿಸಿ, ಓದಿ ಸಹಿ ಮಾಡಿ ಕೊಟ್ಟಿದ್ದೇವೆ’ ಎಂದು ಪ್ರತಿಜ್ಞಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.