ADVERTISEMENT

ಅಂಕೋಲಾ: ಲಿಂಬೆಹಣ್ಣು ವ್ಯಾಪಾರಕ್ಕೆ ದಿನವೂ ₹ 150 ಕರ!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 16:09 IST
Last Updated 27 ಅಕ್ಟೋಬರ್ 2020, 16:09 IST
ಅಂಕೋಲಾದಲ್ಲಿ ಲಿಂಬೆಹಣ್ಣು ವ್ಯಾಪಾರಿಗಳಿಗೆ ನೀಡಿದ ಕರ ವಸೂಲಿ ರಶೀದಿ
ಅಂಕೋಲಾದಲ್ಲಿ ಲಿಂಬೆಹಣ್ಣು ವ್ಯಾಪಾರಿಗಳಿಗೆ ನೀಡಿದ ಕರ ವಸೂಲಿ ರಶೀದಿ   

ಅಂಕೋಲಾ: ಪುರಸಭೆಯ ವ್ಯಾಪ್ತಿಯಲ್ಲಿ ಲಿಂಬೆಹಣ್ಣು ಹಾಗೂ ತರಕಾರಿ ಮಾರಾಟಗಾರರಿಂದ ದಿನಕ್ಕೆ ₹ 150ಯಂತೆ ಕರ ವಸೂಲಿ ಮಾಡಲಾಗುತ್ತಿದೆ. ಇದರ ಬಗ್ಗೆ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಪೊಲೀಸರು ದೂರು ನೀಡಿದ್ದಾರೆ.

ಪುರಸಭೆಯು ಮಾರುಕಟ್ಟೆಯ ಕರ ವಸೂಲಿ ಕಾರ್ಯವನ್ನು ಸುಬ್ರಹ್ಮಣ್ಯ.ಎನ್.ಗೌಡ ಎಂಬುವವರಿಗೆ ಗುತ್ತಿಗೆ ನೀಡಿದೆ. ದಿನವೂ ಹೆಚ್ಚಿನ ಕರ ವಸೂಲಿ ಮಾಡಿ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಕೇವಲ ಮೂರು ಅಡಿ ಜಾಗದಲ್ಲಿ ಕುಳಿತು ಲಿಂಬೆಹಣ್ಣು ಮಾರಾಟ ಮಾಡಲು ಪ್ರತಿ ದಿನಕ್ಕೆ ಇಷ್ಟೊಂದು ಶುಲ್ಕ ವಿಧಿಸಲಾಗುತ್ತಿದೆ. ಬಹುತೇಕ ವ್ಯಾಪಾರಿಗಳು ಹೊರ ಜಿಲ್ಲೆಯವರು. ಅವರು ಹೆಚ್ಚಿನ ಕರ ನೀಡುವುದರಿಂದ ಆ ಮೊತ್ತವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ಹೆಚ್ಚಿನ ದರದಲ್ಲಿ ಕರ ವಸೂಲಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ, ಪುರಸಭೆಯ ಮುಖ್ಯಸ್ಥರು ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇನೆ. ಜಿಲ್ಲೆಯಲ್ಲಿ ಒಂದು ದಿನವಾದರೂ ಗ್ರಾಹಕರ ಮತ್ತು ಮಾರಾಟಗಾರರ ದೃಷ್ಟಿಯಿಂದ ಕರವಸೂಲಿ ರಹಿತ ಸಂತೆಯನ್ನು ನಡೆಸಬೇಕು’ ಎಂದು ಮಾಧವ ನಾಯಕ ಒತ್ತಾಯಿಸಿದ್ದಾರೆ.

ADVERTISEMENT

ಪುರಸಭೆಯ ಕರ ವಸೂಲಿ ಪಟ್ಟಿಯಲ್ಲಿ ಲಿಂಬೆಹಣ್ಣು ವ್ಯಾಪಾರಿಗಳಿಂದ ದಿನಕ್ಕೆ ₹ 50ರಂತೆ ಕರ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆಯ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ‘ಹೆಚ್ಚಿನ ಕರ ವಸೂಲಿ ವಿಚಾರವು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.