ADVERTISEMENT

ಲೋಗೋ ವಿವಾದ: ಪುರಸಭೆ ಅಧ್ಯಕ್ಷರ ವಿರುದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 15:32 IST
Last Updated 16 ಆಗಸ್ಟ್ 2022, 15:32 IST
ಹಳಿಯಾಳ ಪಟ್ಟಣದ ಶಿವಾಜಿ ವೃತ್ತದ ಹತ್ತಿರ ಪುರಸಭೆಯಿಂದ ಅಳವಡಿಸಿದ್ದ ಐತಿಹಾಸಿಕ ಸ್ಮಾರಕದ ಲೋಗೋವನ್ನು ಸೋಮವಾರ ರಾತ್ರಿ ತೆರವುಗೊಳಿಸಲಾಗಿದೆ
ಹಳಿಯಾಳ ಪಟ್ಟಣದ ಶಿವಾಜಿ ವೃತ್ತದ ಹತ್ತಿರ ಪುರಸಭೆಯಿಂದ ಅಳವಡಿಸಿದ್ದ ಐತಿಹಾಸಿಕ ಸ್ಮಾರಕದ ಲೋಗೋವನ್ನು ಸೋಮವಾರ ರಾತ್ರಿ ತೆರವುಗೊಳಿಸಲಾಗಿದೆ   

ಹಳಿಯಾಳ: ಪಟ್ಟಣದಲ್ಲಿ ಅಳವಡಿಸಿದ್ದ ವಿವಾದಕ್ಕೀಡಾಗಿದ್ದ ಲೋಗೊವನ್ನು ಪುರಸಭೆಯಿಂದ ಸೋಮವಾರ ರಾತ್ರಿ ತೆರವುಗೊಳಿಸಲಾಯಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿರುವ ಶಿವಾಜಿ ವೃತ್ತದ ಬಳಿ ಅಳವಡಿಸಿದ ಲಾಂಛನದಲ್ಲಿ (ಲೋಗೊ) ಮೊಗಲರ ಸಂಸ್ಕೃತಿಯನ್ನು ಬಿಂಬಿಸುವ ಸ್ಮಾರಕಗಳನ್ನು ಬಳಸಲಾಗಿದೆ. ಇದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಬಿ.ಜೆ.ಪಿ ಹಾಗೂ ಕೆಲವು ಸಂಘಟನೆಗಳ ಮುಖಂಡರು ಭಾನುವಾರ ತಡರಾತ್ರಿಯವರೆಗೂ ಪ್ರತಿಭಟನೆ, ಧರಣಿ ನಡೆಸಿದ್ದರು.

ಮಾಜಿ ಶಾಸಕ ಸುನಿಲ ಹೆಗಡೆ ಮಧ್ಯರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದು, ವಿವಾದ ಉಂಟು ಮಾಡುವ ಲೋಗೊವನ್ನು ಅಳವಡಿಸಿದವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು. ಆಗ ಮಾತ್ರ ಧರಣಿಯನ್ನು ಹಿಂಪಡೆಯಲಾಗುವುದು ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಲೋಗೊ ಅಳವಡಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆದರು.

ADVERTISEMENT

ಪ್ರಕರಣ ದಾಖಲು:

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ಶಿವಾಜಿ ವೃತ್ತದ ಬಳಿ ಒಂದು ಕಟ್ಟೆ ನಿರ್ಮಿಸಿ ಲೋಗೋವನ್ನು ಅದರ ಮೇಲೆ ಇಡಲಾಗಿತ್ತು. ಆ.14ರಂದು ಪುರಸಭೆಯ ಸಭಾಭವನದಲ್ಲಿ ಸದಸ್ಯರ ಸಭೆ ನಡೆದಿತ್ತು. ಆಗ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಮಾತನಾಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹಳಿಯಾಳ ಪಟ್ಟಣದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಜರುದ್ದೀನ್ ಬಸರಿಕಟ್ಟಿ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಲಂ 107 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.