ADVERTISEMENT

ವಾಮನಮೂರ್ತಿ ತ್ರಿವಿಕ್ರಮನಾಗಿ ಬೆಳೆದಿದ್ದು ಅಚ್ಚರಿ: ಗಂಗಾಧರೇಂದ್ರ ಸರಸ್ವತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 12:54 IST
Last Updated 29 ಡಿಸೆಂಬರ್ 2019, 12:54 IST
ಪೇಜಾವರ ಶ್ರೀಗಳಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶೀರ್ವಾದ ಪಡೆದ ಸಂದರ್ಭ
ಪೇಜಾವರ ಶ್ರೀಗಳಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಶೀರ್ವಾದ ಪಡೆದ ಸಂದರ್ಭ   

ಶಿರಸಿ: ‘ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಅಗಲುವಿಕೆಯಿಂದ ದುಃಖವಾಗಿದೆ. ವಾಮನಮೂರ್ತಿ ತ್ರಿವಿಕ್ರಮನಾಗಿ ದೇಶವ್ಯಾಪಿ ಬೆಳೆದಿದ್ದು ಅಚ್ಚರಿ. ಈ ಭಾಗದ ಯಾವುದೇ ಸಮಸ್ಯೆಯನ್ನೂ ಸಮರ್ಪಕವಾಗಿ ಬಗೆಹರಿಸುತ್ತಿದ್ದರು. ಶ್ರೀಮಠದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇತ್ತು. ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಂಡಿದ್ದೇವೆ. ಅವರ ಸೇವೆ ಮರೆಯುವಂತಿಲ್ಲ’ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

‘ರಾಮಮಂದಿರ ನಿರ್ಮಾಣಕ್ಕೆ ಅವಿರತ ಶ್ರಮ’

‘ಸಾಮಾಜಿಕ ಕಳಕಳಿಯುಳ್ಳ ಯತಿಶ್ರೇಷ್ಠರು, ಜ್ಞಾನಿಯಾಗಿದ್ದ ವಿಶ್ವೇಶತೀರ್ಥರ ನಿಧನ ದುಃಖದ ಸಂಗತಿ. ಯಾವುದೇ ಸಾಮಾಜಿಕ ಸಮಸ್ಯೆಯಿದ್ದರೂ, ಮುಂಚೂಣಿಯಲ್ಲಿ ನಿಂತು ಅದನ್ನು ಸೌಹಾರ್ದಯುತವಾಗಿ ಬಹೆಗರಿಸಿದ ಕೀರ್ತಿ ಶ್ರೀಗಳದ್ದು. ರಾಷ್ಟ್ರೀಯತೆ ಮತ್ತು ಭಾರತೀಯ ವಿಚಾರಗಳ ಬಗ್ಗೆ ಸಂಪೂರ್ಣ ನಂಬಿಕೆಯನ್ನಿಟ್ಟು, ಅಯೋಧ್ಯೆಯಲ್ಲಿ ಯೋಜಿತ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶ್ರೀಗಳ ಅವಿರತ ಶ್ರಮ ಚಿರಸ್ಮರಣೀಯ. ವಿಶ್ವ ಹಿಂದೂ ಪರಿಷತ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸನಾತನ ಸಂಸ್ಕೃತಿಯ ಆತ್ಮ ಸ್ವರೂಪಿ’

‘ಸನಾತನ ಸಂಸ್ಕೃತಿಯ ಆತ್ಮ ಸ್ವರೂಪಿ ವಿಶ್ವೇಶ್ವರತೀರ್ಥ ಶ್ರೀಪಾದರು ಭೌತಿಕವಾಗಿ ನಮ್ಮನ್ನಗಲಿದ್ದಾರೆ. ಹಿಂದೂ ಸಮಾಜದ ಅಭ್ಯುದಯಕ್ಕಾಗಿ ಹಾಗೂ ಸಾಮಾಜಿಕ ಸೇವಾ ಮನೋಭಾವದಿಂದ ರಾಷ್ಟ್ರಮಟ್ಟದಲ್ಲಿ ಗುರುತರ ಕೆಲಸಗಳನ್ನು ನಿರ್ವಹಿಸಿದ ಶ್ರೇಯಸ್ಸು ಶ್ರೀಗಳದ್ದು. ಸಾತ್ವಿಕ ಕ್ಷತ್ರೀಯನಂತೆ ಕಳೆದ ಮುಕ್ಕಾಲು ಶತಮಾನಗಳ ಕಾಲ ಹಿಂದೂ ಧರ್ಮದ ಸಂರಕ್ಷಣೆಯ ಹೊಣೆಹೊತ್ತು, ಸನಾತನ ಶ್ರೀಮಂತ ನಾಗರಿಕತೆಯನ್ನು ಮುಂದಿನ ತಲೆಮಾರಿಗೆ ಹೊತ್ತೊಯ್ದ ಮಹಾಋಷಿ ಶ್ರೀಕೃಷ್ಣನಲ್ಲಿ ಐಕ್ಯರಾದರು’ ಎಂದು ಸಂಸದ ಅನಂತಕುಮಾರ್ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.