ADVERTISEMENT

ವಿವಾಹ ನೋಂದಣಿ: ಹೊಸ ಗೊಂದಲ ಸೃಷ್ಟಿ

ಆದೇಶದ ನೆಪ ಹೇಳಿ ನುಣುಚಿಕೊಳ್ಳುತ್ತಿರುವ ಉಪನೋಂದಣಾಧಿಕಾರಿಗಳು

ಗಣಪತಿ ಹೆಗಡೆ
Published 18 ಏಪ್ರಿಲ್ 2022, 19:30 IST
Last Updated 18 ಏಪ್ರಿಲ್ 2022, 19:30 IST
   

ಶಿರಸಿ: ವಿವಾಹ ನೋಂದಣಿ ಅಧಿಕಾರವನ್ನು ಗ್ರಾಮ ಪಂಚಾಯ್ತಿಗಳ ಪಿಡಿಓಗಳಿಗೆ ನೀಡಿ ಸರ್ಕಾರ ಏ.16 ರಂದು ಆದೇಶ ಹೊರಡಿಸಿದ ಬಳಿಕ ಬಹುತೇಕ ಕಡೆಗಳಲ್ಲಿ ಉಪನೊಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದ ನೋಂದಣಿಗೆ ಬಂದವರು ಗೊಂದಲಕ್ಕೆ ಸಿಲುಕುತ್ತಿದ್ದಾರೆ.

ಈವರೆಗೆ ವಿವಾಹ ನೊಂದಣಿಯಲ್ಲಿ ಜಿಲ್ಲೆ ಅಥವಾ ತಾಲ್ಲೂಕು ಕೇಂದ್ರಗಳಲ್ಲಿರುವ ಉಪನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಯಲ್ಲಿ ಮಾಡಲಾಗುತ್ತಿತ್ತು. ಸರ್ಕಾರದ ಹೊಸ ಆದೇಶ ಪ್ರಕಟವಾದ ಅಲ್ಲಿ ನೋಂದಣಿಗೆ ಬಂದ ಗ್ರಾಮೀಣ ಪ್ರದೇಶದ ಜನರನ್ನು ವಾಪಸ್ ಕಳಿಸಲಾಗುತ್ತಿದೆ.

ನೋಂದಣಿಗೆ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಸಂಪರ್ಕಿಸಿದರೆ ಅಲ್ಲಿ ಈವರೆಗೆ ನೋಂದಣಿಗೆ ಯಾವುದೇ ಸ್ಪಷ್ಟ ಮಾನದಂಡ ನೀಡಿಲ್ಲ. ಹೀಗಾಗಿ ನೋಂದಣಿ ಪ್ರಕ್ರಿಯೆ ಸದ್ಯಕ್ಕಿಲ್ಲ ಎಂಬ ಉತ್ತರ ಸಿಗುತ್ತಿದೆ. ಸೋಮವಾರವೇ ಶಿರಸಿ ಸೇರಿದಂತೆ ಜಿಲ್ಲೆಯ ಹಲವೆಡೆ ನೂರಾರು ಜನರಿಗೆ ಇಂತಹ ಗೊಂದಲದ ಅನುಭವ ಉಂಟಾಗಿದೆ.

ADVERTISEMENT

‘ವಿವಾಹ ನೋಂದಣಿಗೆ ಸೋಮವಾರ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದೆವು. ಅಲ್ಲಿ ವಿವಾಹ ನೋಂದಣಿ ಮಾಡಲಾಗದು. ಸ್ಥಳೀಯ ಗ್ರಾಮ ಪಂಚಾಯ್ತಿ ಪಿಡಿಓ ಸಂಪರ್ಕಿಸಿ ಎಂದು ಸಿಬ್ಬಂದಿ ಉತ್ತರಿಸಿದರು. ಗ್ರಾಮ ಪಂಚಾಯ್ತಿಗೆ ತೆರಳಿ ವಿಚಾರಿಸಿದರೆ ಪ್ರಕ್ರಿಯೆ ನಡೆಸಲು ಸೂಚನೆ ಬಂದಿಲ್ಲ ಎಂಬ ಉತ್ತರ ಸಿಕ್ಕಿತು’ ಎಂದು ಹನುಮಂತಿಯ ದಿನೇಶ್ ನಾಯ್ಕ ತಮಗಾದ ಗೊಂದಲ ವಿವರಿಸಿದರು.

‘ವಿವಾಹ ನೋಂದಣಿ ವಿಚಾರದಲ್ಲಿ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಜನರು ಪರದಾಡುವಂತಾಗಿದೆ. ಸರ್ಕಾರ ಇಂತಹ ಗೊಂದಲವನ್ನು ಆದಷ್ಟು ಬೇಗ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ವಿವಾಹ ನೋಂದಣಿ ಅಧಿಕಾರ ಆಯಾ ಗ್ರಾಮ ಪಂಚಾಯ್ತಿಗೆ ವರ್ಗಾಯಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಂತೆ ನಾವು ನೋಂದಣಿ ಮಾಡಲಾಗದು. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಶಿರಸಿಯ ಉಪನೋಂದಣಾಧಿಕಾರಿ ರಾಜೇಶ್ವರಿ ಹೆಗಡೆ ಪ್ರತಿಕ್ರಿಯಿಸಿದರು.

ಹೊಸ ಭಾರಕ್ಕೆ ಬೇಸರ

ಸರಕಾರ ದಿನಕ್ಕೊಂದು ಭಾರವನ್ನು ಹೆಗಲಿಗೆ ಏರಿಸುತ್ತಿದ್ದು ಕೆಲಸದ ಒತ್ತಡದಿಂದ ಬಳಲುವಂತಾಗಿದೆ ಎಂದು ಹಲವು ಪಿಡಿಓಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ಕಳೆದ ವರ್ಷ ಜನನ, ಮರಣ ದಾಖಲೆ ನೀಡುವ ಜವಾಬ್ದಾರಿಯನ್ನೂ ನೀಡಲಾಗಿದೆ. ಈಗ ವಿವಾಹ ನೋಂದಣಿ ಪ್ರಕ್ರಿಯೆಯನ್ನೂ ಕೈಗೊಳ್ಳಬೇಕಿರುವುದರಿಂದ ದೈನಂದಿನ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಿಡಿಓ ಒಬ್ಬರು.

------------

ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ನಡೆಸುವ ಬಗ್ಗೆ ನೋಂದಣಾಧಿಕಾರಿಗಳ ಜತೆ ಚರ್ಚಿಸಿ ಸೂಚನೆ ನೀಡಲಾಗುವುದು.

ಮುಲ್ಲೈ ಮುಗಿಲನ್,ಜಿಲ್ಲಾಧಿಕಾರಿ

---------------

ಪಿಡಿಓಗಳು ವಿವಾಹ ನೋಂದಣಿ ಮಾಡಬೇಕು ಎಂದು ಸರ್ಕಾರದ ಆದೇಶವಷ್ಟೆ ಬಂದಿದೆ. ಈ ಸಂಬಂಧ ಸ್ಪಷ್ಟ ಮಾರ್ಗಸೂಚಿ ಪ್ರಕಟಗೊಂಡ ಬಳಿಕ ಪಿಡಿಓಗಳಿಗೆ ತರಬೇತಿ ನೀಡಲಾಗುತ್ತದೆ. ಆ ನಂತರ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಎಂ.ಪ್ರಿಯಾಂಗಾ,ಜಿಲ್ಲಾ ಪಂಚಾಯ್ತಿ ಸಿಇಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.