ADVERTISEMENT

ಇದು ಕಾಂಗ್ರೆಸ್ ಕಾರ್ಯಕರ್ತರ ಚುನಾವಣೆ: ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿಕೆ

ಯಲ್ಲಾಪುರದಲ್ಲಿ ‍ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 7:00 IST
Last Updated 1 ಡಿಸೆಂಬರ್ 2021, 7:00 IST
ಯಲ್ಲಾಪುರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯಲ್ಲಾಪುರ ತಾಲ್ಲೂಕು ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತಯಾಚನೆ ಮಾಡಿದರು
ಯಲ್ಲಾಪುರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯಲ್ಲಾಪುರ ತಾಲ್ಲೂಕು ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತಯಾಚನೆ ಮಾಡಿದರು   

ಯಲ್ಲಾಪುರ: ಪಕ್ಷ ಭರವಸೆ ಇಟ್ಟು ಬಹುದೊಡ್ಡ ಜವಾಬ್ದಾರಿಯನ್ನು ನೀಡಿದೆ. ವರಿಷ್ಠರ ನಂಬಿಕೆಯನ್ನು ನಿಜವಾಗಿಸಬೇಕಾದರೆ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಕೈಜೋಡಿಸಿ ಸ್ಥಳೀಯ ಸಂಸ್ಥೆಗಳ ಚುನಾಯಿತರಾಗಿರುವ ಸದಸ್ಯರ ಮನೆ ಮನೆಗೂ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಅನಿವಾರ್ಯವೇಕೆ ಎಂಬುದನ್ನು ವಿವರಿಸಬೇಕಿದೆ ಎಂದು ವಿಧಾನಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಯಲ್ಲಾಪುರ ತಾಲ್ಲೂಕು ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಪ್ರಮುಖ ಅಂಶವಾಗಿದ್ದು, ಬೆಲೆ ಹೆಚ್ಚಳದಿಂದ ಜನ ಬೇಸತ್ತಿದ್ದಾರೆ. ಕೇವಲ ಅಧಿಕಾರದ ದಾಹಕ್ಕಾಗಿ ಪರಿಷತ್ ಚುನಾವಣೆಯ ಆಯ್ಕೆ ಬಯಸದೇ ಕೈಲಾದ ಸಮಾಜ ಸೇವೆ ಮಾಡುವ ಉದ್ದೇಶ ನನ್ನದಾಗಿದೆ. ಇದು ಭೀಮಣ್ಣನ ಚುನಾವಣೆಯಲ್ಲದೇ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಚುನಾವಣೆಯಾಗಿದೆ. ಪರಿಷತ್ ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತ ನನಗೆ ನೀಡಿ ಎಂದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್ ಗಾಂವ್ಕರ ಮಾತನಾಡಿ, ಸಮಾಜಮುಖಿ ವ್ಯಕ್ತಿತ್ವ ಭೀಮಣ್ಣ ನಾಯ್ಕ ಅವರದ್ದಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಕೇವಲ ಪಕ್ಷದ ಮೇಲಿನ ವ್ಯಾಮೋಹಕ್ಕೋ , ವ್ಯಕ್ತಿಯ ಮೇಲಿನ ಅಂಧ ಭಕ್ತಿಗೋ ಮರುಳಾಗದೇ ಜನಪರ ಧ್ವನಿಯಾಗಿ ನಿಲ್ಲುವ ವ್ಯಕ್ತಿತ್ವದ ಭೀಮಣ್ಣ ನಾಯ್ಕರ ಆಯ್ಕೆ ಮಾಡಬೇಕು ಎಂದು ಹೇಳಿದರು.

ಪರಿಷತ್ ಚುನಾವಣಾ ವೀಕ್ಷಕಿ ಗಾಯತ್ರಿ ನೇತ್ರೇಕರ್ ಹಾಗೂ ಪಕ್ಷದ ಪ್ರಮುಖರಾದ ಉಲ್ಲಾಸ ಶಾನಭಾಗ, ಟಿ.ಸಿ. ಗಾಂವ್ಕರ್, ಸೂರ್ಯನಾರಾಯಣ ಭಟ್, ರವಿಚಂದ್ರ ನಾಯ್ಕ ಮಾತನಾಡಿದರು. ಆರ್.ಪಿ ನಾಯ್ಕ, ದೀಪಕ್ ದೊಡ್ಡೂರ್, ಕಡವೆ ಶ್ರೀಪಾದ ಭಟ್ಟ, ದಿಲೀಪ್ ರೋಖಡೆ ಹಾಗೂ ವಿವಿಧ ಘಟಕಗಳ ಪ್ರಮುಖರು , ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರು, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.