ADVERTISEMENT

ದೇಶಪಾಂಡೆ ಸಾಧನೆ ಪತ್ರ ಬಿಜೆಪಿ ವಕ್ತಾರರಿಗೆ ರವಾನೆ: ದೊಡ್ಡೂರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 14:04 IST
Last Updated 5 ಆಗಸ್ಟ್ 2021, 14:04 IST
ದೀಪಕ ದೊಡ್ಡೂರು
ದೀಪಕ ದೊಡ್ಡೂರು   

ಶಿರಸಿ: ಜಿಲ್ಲೆಗೆ ಆರ್.ವಿ.ದೇಶಪಾಂಡೆ ಕೊಡುಗೆ ಏನು ಎಂದು ಪದೇ ಪದೇ ಪ್ರಶ್ನಿಸುವ ಬಿಜೆಪಿ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ ಅವರಿಗೆ ದೇಶಪಾಂಡೆ ಸಾಧನೆಯ ದಾಖಲೆಯನ್ನು ಅಂಚೆ ಮೂಲಕ ರವಾನಿಸಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ದೀಪಕ ದೊಡ್ಡೂರು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆ ಪ್ರಗತಿಯಾಗಲು ದೇಶಪಾಂಡೆ ಕಾರಣ. ಅವರು ತಂದ ಅನುದಾನ, ಮಾಡಿರುವ ಕೆಲಸಗಳ ಸಮಗ್ರ ವಿವರಗಳನ್ನು ವಕ್ತಾರರಿಗೆ ಕಳುಹಿಸಿದ್ದೇವೆ’ ಎಂದರು.

‘ಬಿಜೆಪಿಯವರು ಹಿಟ್ಲರ್ ಧೊರಣೆ ಅನುಸರಿಸಲು ಹೊರಟಂತಿದೆ. ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ ಎಂಬುದನ್ನು ಅರಿಯಬೇಕು. ನೆರೆಬಾಧಿತ ಪ್ರದೇಶಕ್ಕೆ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದನ್ನು ಟೀಕಿಸುವ ಮುನ್ನ ಯೋಚಿಸಬೇಕು. ನೆರೆ ಬಂದು ಹೋದ ನಂತರ ಕ್ಷೇತ್ರಕ್ಕೆ ಭೇಟಿ ನೀಡಿದ ವಿಧಾನಸಭಾ ಅಧ್ಯಕ್ಷರು, ಈವರೆಗೂ ಕ್ಷೇತ್ರದ ಜನರ ಸಂಕಷ್ಟ ಆಲಿಸಲು ಬಾರದ ಸಂಸದರ ಬಗ್ಗೆ ಬಿಜೆಪಿಯವರು ಮಾತನಾಡಲಿ’ ಎಂದರು.

ADVERTISEMENT

‘ಪ್ರವಾಹ ಪೀಡಿತರ ಸಂಕಷ್ಟವನ್ನು ಕಾಂಗ್ರೆಸ್ ನಾಯಕರು ಆಲಿಸಿದ್ದಾರೆ. ಮೋದಿ, ಯಡಿಯೂರಪ್ಪ ಅವರ ರೀತಿ ಮೊಸಳೆ ಕಣ್ಣೀರು ಸುರಿಸಿಲ್ಲ. ಕಾಂಗ್ರೆಸ್ ಮುಖಂಡರು ಜಿಲ್ಲೆಯಲ್ಲಿ ಓಡಾಟ ನಡೆಸುತ್ತಿರುವುದರಿಂದ ಬಿಜೆಪಿಗೆ ಭಯ ಶುರುವಾಗಿದೆ. ಅಸ್ತಿತ್ವದ ಭೀತಿ ಬಿಜೆಪಿಯವರಲ್ಲಿರಬಹುದೇ ವಿನಾ ಕಾಂಗ್ರೆಸ್ಸಿಗರಿಗಿಲ್ಲ’ ಎಂದರು.

ಪ್ರಮುಖರಾದ ಜಗದೀಶ ಗೌಡ, ಬಸವರಾಜ ದೊಡ್ಮನಿ, ಗಣೇಶ ದಾವಣಗೆರೆ, ಸತೀಶ ನಾಯ್ಕ, ಜಿ.ವಿ.ಹೆಗಡೆ, ಶ್ರೀಪಾದ ಹೆಗಡೆ ಕಡವೆ, ಕುಮಾರ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.