ADVERTISEMENT

ವೈದ್ಯಕೀಯ ಗಂಭೀರ ಪರಿಸ್ಥಿತಿಯೆಂದು ಪರಿಗಣಿಸಿ

ಹರಡುತ್ತಿರುವ ಮಂಗನ ಕಾಯಿಲೆ: ಮನವಿ ಸಲ್ಲಿಸಿದ ವೃಕ್ಷಲಕ್ಷ ಆಂದೋಲನದ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 13:10 IST
Last Updated 7 ಫೆಬ್ರುವರಿ 2019, 13:10 IST
ವೃಕ್ಷಲಕ್ಷ ಆಂದೋಲನದ ಸದಸ್ಯರು ಶಿರಸಿಯಲ್ಲಿ ಉಪವಿಭಾಗಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು
ವೃಕ್ಷಲಕ್ಷ ಆಂದೋಲನದ ಸದಸ್ಯರು ಶಿರಸಿಯಲ್ಲಿ ಉಪವಿಭಾಗಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ಸಾಂಕ್ರಾಮಿಕ ರೋಗವಾಗಿ ಬದಲಾಗುತ್ತಿರುವ ಮಂಗನ ಕಾಯಿಲೆಯನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಮಂಗನ ಕಾಯಿಲೆಯ ಪರಿಸ್ಥಿತಿಯನ್ನು ವೈದ್ಯಕೀಯ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಬೇಕು ಎಂದು ಪರಿಸರ ಸಂಘಟನೆಗಳು ಒತ್ತಾಯಿಸಿವೆ.

ವೃಕ್ಷಲಕ್ಷ ಆಂದೋಲನ ಸಂಘಟನೆಯ ಅಧ್ಯಕ್ಷ ಅನಂತ ಅಶೀಸರ ನೇತೃತ್ವದಲ್ಲಿ ಗುರುವಾರ ಇಲ್ಲಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

‘ಎರಡು ತಿಂಗಳುಗಳಿಂದ ಮಲೆನಾಡು ಹಾಗೂ ಕರಾವಳಿಯಲ್ಲಿ ಮಂಗನ ಕಾಯಿಲೆ ಜನರ ಜೀವ ಹಿಂಡುತ್ತಿದೆ. ವೃಕ್ಷಲಕ್ಷ ಆಂದೋಲನವು ತಜ್ಞರನ್ನೊಳಗೊಂಡ ಸಮಿತಿಯೊಂದಿಗೆ ರೋಗಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದೆ. ಸಾಗರ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಕಾಯಿಲೆ, ಮಲೆನಾಡು, ಕರಾವಳಿ ಜಿಲ್ಲೆಗಳಿಗೆ ಹರಡಿದೆ. ಬೇಸಿಗೆಯಲ್ಲಿ ಅದರ ತೀವ್ರತೆ ಹೆಚ್ಚಾಗಬಹುದು, ಮಳೆಗಾಲ ಬರುವವರೆಗೂ ಇದು ಮುಂದುವರಿಸುವ ಸಾಧ್ಯತೆಯಿದೆ. ವ್ಯಾಪಕವಾಗಿ ಲಸಿಕೆ ಹಾಕಬೇಕಾಗಿದೆ.

ADVERTISEMENT

ಕಾಡಿನಲ್ಲಿ ವಾಸಿಸುವ ರೈತರು, ವನವಾಸಿಗಳು, ಕೂಲಿಕಾರರಿಗೆ ಡಿಎಂಪಿ ತೈಲವನ್ನು ಅಪಾರ ಪ್ರಮಾಣದಲ್ಲಿ ಪೂರೈಸಬೇಕು. ಮಂಗನ ಕಾಯಿಲೆಗೆ ಇನ್ನೂ ನಿರ್ದಿಷ್ಟ ಔಷಧ ಅಭಿವೃದ್ಧಿಪಡಿಸಲಾಗಿಲ್ಲ. ಈ ಬಗ್ಗೆ ರಾಜ್ಯ, ಕೇಂದ್ರ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು. ರೋಗ ನಿರೋಧಕ ಲಸಿಕೆ ಸಾಮರ್ಥ್ಯ ಕೂಡ ಕಡಿಮೆಯಾಗುತ್ತಿರುವುದನ್ನು ಆರೋಗ್ಯ ಇಲಾಖೆಯ ಸಮೀಕ್ಷೆಗಳು ಹೇಳಿವೆ. ಹೀಗಾಗಿ ರೋಗ ಸೋಂಕು ವಿಜ್ಞಾನ, ಔಷಧ ಅಭಿವೃದ್ಧಿ ಸಂಬಂಧ ಸಂಶೋಧನೆ ನಡೆಯಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಪುಣೆಯ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಚೆನ್ನೈನ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ತಜ್ಞರ ಸಹಭಾಗಿತ್ವದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಶೋಧನಾ ಕೌನ್ಸಿಲ್ ಮೂಲಕ ಸಂಶೋಧನೆ ನಡೆಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು. ರೋಗ ಪರೀಕ್ಷೆಗೆ ಬೇಕಾಗುವ ರಕ್ತ ಮತ್ತು ಮತ್ತಿತರ ನಮೂನೆಗಳು, ಸಾಕ್ಷ್ಯಗಳು ಹಾಗೂ ಸುಳಿವುಗಳು ಹೇರಳವಾಗಿ ಲಭಿಸುವುದರಿಂದ ಸಂಶೋಧನೆಗೆ ಅನುಕೂಲವಾಗುತ್ತದೆ. ಶಿವಮೊಗ್ಗದಲ್ಲಿರುವ ಪ್ರಯೋಗಾಲಯವನ್ನು ಸುಸಜ್ಜಿತಗೊಳಿಸಬೇಕು ಎಂದು ಪಶ್ಚಿಮಘಟ್ಟ ಉಳಿಸಿ ಆಂದೋಲನದ ಸಂಚಾಲಕ ಬಿ.ಎಂ.ಕುಮಾರಸ್ವಾಮಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ, ಪರಿಸರ ತಜ್ಞ ನಾಗೇಶ ಹೆಗಡೆ, ಔಷಧ ಸಸ್ಯ ಪ್ರಾಧಿಕಾರದ ಸದಸ್ಯ ಕೇಶವ ಕೊರ್ಸೆ, ಪರಿಸರವಾದಿ ವಾಮನ ಆಚಾರ್ಯ ಒತ್ತಾಯಿಸಿದ್ದಾರೆ. ಪ್ರಮುಖರಾದ ವಿಶ್ವನಾಥ ಬುಗಡಿಮನೆ, ನರಸಿಂಹ ವಾನಳ್ಳಿ, ಆರ್.ಪಿ.ಹೆಗಡೆ, ಗಣಪತಿ ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.