ಕಾರವಾರ: ಬಾಡಿಗೆ ಮುಂಗಡ ಪಡೆದು ಬಸ್ ನೀಡದ ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ, ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ₹50 ಸಾವಿರ ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಕುಮಟಾ ಸಾರಿಗೆ ಘಟಕದ ನಿವೃತ್ತ ನೌಕರ ಶೇಷು ಹರಿಕಾಂತ ಎಂಬುವವರು 2022ರ ಜುಲೈ 15 ರಂದು ಖಾಸಗಿ ಕಾರ್ಯಕ್ರಮಕ್ಕೆ ತೆರಳಲು ₹21 ಸಾವಿರ ಮುಂಗಡ ಪಾವತಿಸಿ ಬಸ್ ಬಾಡಿಗೆಗೆ ನೀಡಲು ಕೋರಿದ್ದರು. ಮುಂಗಡ ಪಡೆದಿದ್ದರೂ ಬಸ್ ಬಾಡಿಗೆಗೆ ನೀಡಬೇಕಾದ ಮುನ್ನಾದಿನ ರಾತ್ರಿ ಬಸ್ ನೀಡಲಾಗದು ಎಂದು ಘಟಕ ವ್ಯವಸ್ಥಾಪಕ ವೈ.ಕೆ.ಬಾನಾವಳಿಕರ್ ನಿರಾಕರಿಸಿದ್ದರು ಎಂದು ಶೇಷು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಸದಸ್ಯೆ ನಯನಾ ಕಮತೆ ಅವರು ಪ್ರಕರಣದ ಪ್ರತಿವಾದಿಗಳಾಗಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಸಾರಿಗೆ ಘಟಕ ವ್ಯವಸ್ಥಾಪಕ ಮತ್ತು ವಿಭಾಗೀಯ ಸಂಚಾರ ನಿಯಂತ್ರಕರಿಗೆ ₹50 ಸಾವಿರ ಪರಿಹಾರ ಪಾವತಿಸಬೇಕು ಮತ್ತು ದೂರುದಾರರು ಪಾವತಿಸಿದ್ದ ₹21 ಸಾವಿರ ಮೊತ್ತಕ್ಕೆ ಶೇ 7ರ ಬಡ್ಡಿ ಸೇರಿಸಿ ಅವರಿಗೆ ಹಣ ಮರಳಿಸಬೇಕು ಎಂದು ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.