
ಹಳಿಯಾಳ: ಉಳವಿ ಜಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ದಿನದ 24 ಗಂಟೆಯೂ ಅನ್ನದಾಸೋಹ ಅಲ್ಫೋಪಹಾರ ಸೇವೆಯನ್ನು ಹಳಿಯಾಳ ತಾಲ್ಲೂಕಿನ ಭಕ್ತವೃಂದದವರು ಕಳೆದ 6 ವರ್ಷಗಳಿಂದ ಆರಂಭಿಸಿರುತ್ತಾರೆ.
ಇಲ್ಲಿನ ಕೇಸರೊಳ್ಳಿ ರಸ್ತೆಯಲ್ಲಿರುವ ಘೋರಿಖಾನ್ ಪೆಟ್ರೋಲ್ ಪಂಪ್ ಎದುರಿರುವ ಶ್ರೀಪತಿ ಭಟ ರವರ ಜಮೀನಿನಲ್ಲಿ ಬೃಹತ್ ಪೆಂಡಾಲನ್ನು ನಿರ್ಮಿಸಿ ಅನ್ನದಾಸೋಹ ಅಲ್ಪೋಪಹಾರದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸೇವೆಯು ಫೆ. 1 ರಿಂದ ಪ್ರಾರಂಭವಾಗಿದ್ದು ಫೆ. 4ರ ತಡರಾತ್ರಿ ವರೆಗೆ ನಡೆಯಲಿದೆ.
ಯಾತ್ರಾರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಶುದ್ಧಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉಳವಿಗೆ ತೆರಳುವ ಸಾರಿಗೆ ವಾಹನ, ಟ್ರ್ಯಾಕ್ಟರ್, ಚಕ್ಕಡಿಗಳಿಂದ ಸಾಗುವ ಯಾತ್ರಾರ್ಥಿಗಳು ದಾಸೋಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿನಿತ್ಯ ಸುಮಾರು 10 ಸಾವಿರದಿಂದ ಕೊನೆಯ ದಿನದ ವರೆಗೂ 50 ಸಾವಿರ ಕ್ಕೂ ಮಿಕ್ಕಿ ಜನರು ಅನ್ನದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವುದು ಕಾಣುತ್ತಿದೆ. ದೂರದ ಊರಿನಿಂದ ಬಂದ ಸಾರಿಗೆ ವಾಹನ ಮತ್ತಿತರ ವಾಹನಗಳಿಗೆ ನಿಲುಗಡೆಗೆ (ಪಾರ್ಕಿಂಗ್) ವ್ಯವಸ್ಥೆ ಕಲ್ಪಿಸಲಾಗಿದೆ.
2020 ನೇ ಸಾಲಿನಲ್ಲಿ ಓರ್ವ ವೀರಶೈವ ಸಮಾಜದ ವೈದಿಕ ಉಮಾಶಂಕರ ವೀರೇಶ ಮದ್ನಳ್ಳಿಮಠ ರವರು ತಮ್ಮ ವೈದಿಕ ವೃತ್ತಿಯಿಂದ ಹಾಗೂ ಮತ್ತಿತರ ಕಾರ್ಯದಿಂದ ಕೂಡಿಸಿದ ಹಣ ಹಾಗೂ ದವಸ ಧ್ಯಾನವನ್ನು ಉಳವಿ ಜಾತ್ರೆ ಅಂಗವಾಗಿ ದಾಸೋಹಕ್ಕಾಗಿ ಮೀಸಲಿಟ್ಟಿದ್ದು ಜಾತ್ರೆ ಪ್ರಾರಂಭದಿಂದ ವಾರಾಂತ್ಯದ ವರೆಗೂ ಕೆಲವರ ಜೊತೆಗೂಡಿ ದಾಸೋಹ ಏರ್ಪಡಿಸಲು ಪ್ರಾರಂಭಿಸಿದ್ದರು. ನಂತರ ಉಮಾಶಂಕರ ಮದ್ನಳ್ಳಿಮಠ ಜೊತೆ ತಾಲ್ಲೂಕಿನ ಅನೇಕ ಭಕ್ತಾದಿಗಳು ಮತ್ತಿತರ ಸಂಘ-ಸಂಸ್ಥೆಯ ಪದಾಧಿಕಾರಿಗಳು ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಅನ್ನದಾಸೋಹಕ್ಕೆ ಸಹಕಾರ ನೀಡುತ್ತಿದ್ದಾರೆ.
ಪ್ರತಿ ವರ್ಷ ಅನ್ನದಾಸೋಹ ಪ್ರಾರಂಭಿಸಿದಾಗ ಅನೇಕ ಭಕ್ತಾದಿಗಳು ತಮ್ಮ ಭಕ್ತಿ, ಶಕ್ತಿಗೆ ಅನುಸಾರವಾಗಿ ಅಕ್ಕಿ, ಬೆಲ್ಲ, ಎಣ್ಣೆ, ರೊಟ್ಟಿ, ಚಪಾತಿ ಮತ್ತಿತರ ದವಸ ಧಾನ್ಯವನ್ನು ಸಲ್ಲಿಸುತ್ತಾ ಬಂದಿದ್ದು ಅಂದಿನಿಂದ ದಾಸೋಹಕ್ಕೆ ದಾನಿಗಳ ಸಂಖ್ಯೆ ಜೊತೆಗೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ. ಈಗಾಗಲೇ ಧಾರವಾಡದ ಗರಗ ನಿಂದ ಸುಮಾರು 20 ಸಾವಿರದಷ್ಟು ರೊಟ್ಟಿ ತರಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ, ಚಹಾಪುಡಿ ಫೆ 4 ರ ವರೆಗೂ ಯಾವುದೇ ರೀತಿಯಿಂದ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ.
ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಅಲ್ಪೋಪಹಾರ, ಚಹಾ 11 ಗಂಟೆಯಿಂದ ನಿರಂತರವಾಗಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿದಿನ ತಾಜಾ ತರಕಾರಿಗಳನ್ನು ತಂದು ಅಡುಗೆಗೆ ಸಿದ್ದ ಪಡಿಸಲಾಗುತ್ತದೆ. ವಿವಿಧ ಮಹಿಳಾ ಸ್ವಸಹಾಯ ಸಂಘಗಳು ಊಟ ಬಡಿಸುವುದರ ಜೊತೆಗೆ ಅಡುಗೆ ಸಿದ್ದತೆಯಲ್ಲಿ ಸಹ ತೊಡಗಿಸಿಕೊಂಡು ತೊಡಗಿಸಿಕೊಂಡಿದ್ದು ವಿಶೇಷವಾಗಿದೆ.
ಸಂಘ ಸಂಸ್ಥೆಗಳ ಜೊತೆ ಪುರಸಭೆ, ಅರಣ್ಯ ಇಲಾಖೆ, ಹೆಸ್ಕಾಂ ಮತ್ತಿತರ ಇಲಾಖೆಯು ಸಹಕಾರ ನೀಡುತ್ತಿವೆ. ಯಾತ್ರಾರ್ಥಿಗಳು ಹಳಿಯಾಳದಲ್ಲಿ ಬಂದಾಗ ಯಾವುದೇ ತೊಂದರೆ ಇಲ್ಲದೇ ಉಳವಿ ಜಾತ್ರೆಗೆ ತೆರಳಲು ಸಕಲ ವ್ಯವಸ್ಥೆಯನ್ನು ಹಳಿಯಾಳದ ಭಕ್ತಾದಿಗಳಿಂದ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿಒಮ್ಮೆಲೇ ಬರುವ ಯಾತ್ರಾರ್ಥಿಗಳು ಮುಂಗಡವಾಗಿ ತಿಳಿಸಿದರೆ ಅವರಿಗಾಗಿ ಅಡುಗೆಯನ್ನು ಕಾಯ್ದಿರಿಸಲಾಗುತ್ತದೆ. ಮಾಹಿತಿಗಾಗಿ ಮೊಬೈಲ್‌ಸಂಖ್ಯೆ : 9008564083, 9686304506 ಅನ್ನು ಸಂರ್ಪಕಿಸಬಹುದು.
ಫೆ 1 ರಂದು ದಾಸೋಹ ಪ್ರಾರಂಭ ವಾಗುವ ಮುನ್ನ ಉಮಾಶಂಕರ ಮದ್ನಳ್ಳಿಮಠ ತನ್ನ ತಾಯಿ ಗಂಗವ್ವಾ ಗುರುಪಾದಯ್ಯ ಮದ್ನಳ್ಳಿಮಠ ರವರ ಶತಮಾನೋತ್ಸವ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.