ADVERTISEMENT

ಮುಂಡಗೋಡ: ರೈತರ ನಿದ್ದೆಗೆಡಿಸಿದ ಸತತ ಮಳೆ

ಗೋವಿನಜೋಳ ರಾಶಿ ಮಾಡಲು ಸಾಧ್ಯವಾಗದ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:16 IST
Last Updated 21 ಮೇ 2025, 14:16 IST
<div class="paragraphs"><p>ಮುಂಡಗೋಡ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಗೋವಿನಜೋಳ ಬೆಳೆಯನ್ನು ಮಳೆಯಿಂದ ರಕ್ಷಿಸಲು ಹೊದಿಸಲಾದ ಪ್ಲಾಸ್ಟಿಕ್‌ ತಾಡಪತ್ರಿ ಮೇಲೆ ನೀರು ಸಂಗ್ರಹಗೊಂಡಿದೆ</p></div>

ಮುಂಡಗೋಡ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಗೋವಿನಜೋಳ ಬೆಳೆಯನ್ನು ಮಳೆಯಿಂದ ರಕ್ಷಿಸಲು ಹೊದಿಸಲಾದ ಪ್ಲಾಸ್ಟಿಕ್‌ ತಾಡಪತ್ರಿ ಮೇಲೆ ನೀರು ಸಂಗ್ರಹಗೊಂಡಿದೆ

   

ಮುಂಡಗೋಡ: ಮೋಡ ಕವಿದ ವಾತಾವರಣ, ಧೋ ಎಂದು ಸುರಿದ ಮಳೆ, ಹಿಂಗಾರಿನಲ್ಲಿ ಮುಸುಕಿನ ಜೋಳ ಬೆಳೆದ ರೈತರ ನಿದ್ದೆಗೆಡಿಸಿದೆ.

ಮೇ ತಿಂಗಳ ಮೊದಲ ವಾರದಿಂದ ಗೋವಿನಜೋಳ ಕಟಾವು ಮಾಡಿ ಮಾರುತ್ತಿದ್ದ ರೈತರಿಗೆ, ಕಳೆದ ಕೆಲವು ದಿನಗಳಿಂದ ಸುರಿದ ಮಳೆಯು, ಕಾಳುಗಳನ್ನು ಒಣಗಿಸಿ ಚೀಲದಲ್ಲಿ ತುಂಬದಂತೆ ಮಾಡಿದೆ. ಹಲವು ರೈತರು ಬಯಲು ಪ್ರದೇಶಗಳಲ್ಲಿ ಒಣಗಲು ಹಾಕಿದ್ದ ಗೋವಿನಜೋಳವನ್ನು ರಾಶಿ ಮಾಡಲು ಸಾಧ್ಯವಾಗದೇ, ಪ್ಲಾಸ್ಟಿಕ್‌ ತಾಡಪತ್ರಿ ಮುಚ್ಚಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ADVERTISEMENT

‘ತಾಲ್ಲೂಕಿನಲ್ಲಿ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬೆಳೆಯಾಗಿ ಗೋವಿನಜೋಳ ಬೆಳೆಯಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿತ್ತು. ಆದರೆ, ಬೆಳೆ ಕಟಾವು ಮಾಡಿದ ನಂತರದ ದಿನಗಳಲ್ಲಿ ಆಗಾಗ ಮಳೆ ಸುರಿಯುತ್ತಿರುವುದರಿಂದ ರಾಶಿ ಮಾಡಿದ ಬೆಳೆ ಮಾರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ’ ಎಂದು ರೈತರು ಅಸಹಾಯಕರಾಗಿ ಹೇಳುತ್ತಿದ್ದಾರೆ.

‘ಬೆಳೆ ತುಸು ತಂಪಾದರೂ, ವ್ಯಾಪಾರಿಗಳು ಕಡಿಮೆ ಬೆಲೆಗೆ ಕೇಳುತ್ತಾರೆ. ತಂಪಾಗಿರುವ ಬೆಳೆಯನ್ನು ಬಹಳ ದಿನಗಳವರೆಗೆ ದಾಸ್ತಾನು ಮಾಡಿಕೊಳ್ಳಲೂ ಆಗುವುದಿಲ್ಲ. ಕೇಳಿದ ದರಕ್ಕೆ ಅನಿವಾರ್ಯವಾಗಿ ಮಾರಬೇಕಾಗುತ್ತದೆ. ವಾರದವರೆಗೆ ನಿರಂತರವಾಗಿ ಮಳೆ ಬರದೇ ಹೋಗಿದ್ದರೇ, ಇಷ್ಟೊತ್ತಿಗೆ ಗೋವಿನಜೋಳ ಮಾರಾಟ ಮಾಡಿ ಆಗಿರುತ್ತಿತ್ತು. ಆದರೆ, ದಿನ ಬಿಟ್ಟು ದಿನ ಮಳೆ ಸುರಿದಿದ್ದರಿಂದ, ಒಂದು ದಿನ ಆರಿಸುವುದು, ಮತ್ತೊಂದು ದಿನ ಪ್ಲಾಸ್ಟಿಕ್‌ ತಾಡಪತ್ರಿಯಿಂದ ಮುಚ್ಚಿಡುವುದು ನಿತ್ಯದ ಕಾಯಕವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲು ಅಡ್ಡಿಯಾಗಿದೆ’ ಎಂದು ರೈತರಾದ ಪರುಶುರಾಮ ಓಣಿಕೇರಿ, ಹನಮಂತ ಸಾಲಗಾಂವ ದೂರಿದರು.

‘ಇಲ್ಲಿನ ಎಪಿಎಂಸಿ ಆವರಣದಲ್ಲಿ ವಾರದ ಹಿಂದೆ ಗೋವಿನಜೋಳ ಒಣಗಲು ಹಾಕಿದ್ದೆವು. ಬಿಸಿಲಿಗೆ ಒಣಗಿದ್ದ ಅರ್ಧದಷ್ಟು ಕಾಳುಗಳನ್ನು ತುಂಬಿ ಮಾರಾಟ ಮಾಡಲಾಯಿತು. ಇನ್ನರ್ಧ ಬೆಳೆಯನ್ನು ಚೀಲದಲ್ಲಿ ತುಂಬಬೇಕೆಂದರೆ, ಮಳೆ ಆಗಾಗ ಬಂದು ಕೆಲಸಕ್ಕೆ ಅಡ್ಡಿಯಾಗುತ್ತಿದೆ. ಸತತ ಮಳೆಯಿಂದ ತಾಡಪತ್ರಿ ಒಳಗೂ ನೀರು ಹೊಕ್ಕಿದ್ದು, ಹೀಗೆಯೇ ಪರಿಸ್ಥಿತಿ ಮುಂದುವರೆದರೆ, ಗೋವಿನಜೋಳ ಮೊಳಕೆ ಒಡೆಯುವ ಸಾಧ್ಯತೆಯಿದೆ. ರೈತರ ಗೋಳು ಕೇಳುವರಿಲ್ಲದಂತಾಗಿದೆ’ ಎಂದು ರೈತ ಸಂತೋಷ ನೋವಿನಿಂದ ಹೇಳಿದರು.

‘ತಾಲ್ಲೂಕಿನಲ್ಲಿ ನೀರಾವರಿ ಅನುಕೂಲ ಇರುವ ರೈತರು ಹಿಂಗಾರು ಬೆಳೆಯಾಗಿ ಗೋವಿನಜೋಳ ಬೆಳೆದಿದ್ದಾರೆ. ಶೇ 90ರಷ್ಟು ಕಟಾವು ಕಾರ್ಯ ಮುಗಿದಿದ್ದು, ಬಹುತೇಕ ರೈತರು ರಾಶಿ ಮಾಡಿ ಮಾರಿದ್ದಾರೆ. ತಡವಾಗಿ ಕಟಾವು ಕಾರ್ಯ ಮಾಡಿದ ರೈತರ ಗೋವಿನಜೋಳ ಬೆಳೆ ಮಳೆಗೆ ಸಿಲುಕಿದೆ. ಒಂದೆರೆಡು ದಿನ ಮಳೆ ಬಿಡುವು ನೀಡಿದರೆ, ಅಂತಹ ರೈತರಿಗೆ ಅನುಕೂಲವಾಗುತ್ತದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಕೃಷ್ಣಪ್ಪ ಮಹಾರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.