ಪ್ರಜಾವಾಣಿ ವಾರ್ತೆ
ಶಿರಸಿ: ’ಇಲ್ಲಿನ ಶಿರಸಿ ಅರ್ಬನ್ ಸಹಕಾರ ಬ್ಯಾಂಕ್ 2024-25ನೇ ಸಾಲಿನಲ್ಲಿ ₹2,361 ಕೋಟಿ ಒಟ್ಟೂ ವ್ಯವಹಾರವನ್ನು ದಾಖಲಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ’ ಎಂದು ಬ್ಯಾಕ್ ಅಧ್ಯಕ್ಷ ಜಯದೇವ ನಿಲೇಕಣಿ ಹೇಳಿದರು.
ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಬ್ಯಾಂಕ್‍ನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟೂ ಠೇವಣಿಯನ್ನು ₹1,377.97 ಕೋಟಿಗಳಿಗೆ, ದುಡಿಯುವ ಬಂಡವಾಳವನ್ನು ₹1,605.01 ಕೋಟಿಗಳಿಗೆ ಹೆಚ್ಚಿಸುವುದರೊಂದಿಗೆ ₹11.07 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ’ ಎಂದರು.
‘ಬ್ಯಾಂಕ್‍ನ ಸದಸ್ಯರ ಸಂಖ್ಯೆ 49,416 ದಾಟಿದ್ದು, ಸಂದಾಯಿತ ಶೇರು ಬಂಡವಾಳ ₹41.32 ಕೋಟಿ ತಲುಪಿದೆ. ಕಳೆದ ವರ್ಷದ ₹116.82 ಕೋಟಿ ಆದಾಯವನ್ನು ₹134.01 ಕೋಟಿಗಳಿಗೆ ಬ್ಯಾಂಕ್ ಹೆಚ್ಚಿಸಿದೆ. 5 ವರ್ಷಗಳಲ್ಲಿ ತನ್ನ ವ್ಯವಹಾರವನ್ನು ₹1,361 ಕೋಟಿಗಳಿಂದ ₹2,361 ಕೋಟಿಗಳಿಗೆ ಅಭಿವೃದ್ಧಿಗೊಳಿಸಿರುವುದು ಬ್ಯಾಂಕ್ ಸದೃಢವಾಗಿ ಪ್ರಗತಿಯತ್ತ ಸಾಗುವ ಸಂಕೇತವಾಗಿದೆ’ ಎಂದು ಹೇಳಿದರು.
ಬ್ಯಾಂಕ್ ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಪ್ರಸಕ್ತ ಇರುವ 9 ಜಿಲ್ಲೆಗಳಿಂದ ಸಂಪೂರ್ಣ ರಾಜ್ಯಕ್ಕೆ ವಿಸ್ತರಿಸುವುದರ ಕುರಿತು ಜಯದೇವ ನಿಲೇಕಣಿ ಅವರು ಮಾಡಿದ ಪ್ರಸ್ತಾವನೆಗೆ ಸರ್ವಸಾಧಾರಣ ಸಭೆಯಲ್ಲಿ ಹಾಜರಿದ್ದ ಸದಸ್ಯರಿಂದ ಒಮ್ಮತದ ಅನುಮೋದನೆ ನೀಡಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟರ್ ಬ್ಯಾಂಕಿನ ಪ್ರಗತಿಯ ಕುರಿತು ಸ್ಥೂಲ ಚಿತ್ರಣವನ್ನು ಸಭೆಗೆ ನೀಡಿದರು. ಬ್ಯಾಂಕ್ ಉಪಾಧ್ಯಕ್ಷ ಸಂತೋಷ ಪಂಡಿತ, ನಿರ್ದೇಶಕ ಸದಾನಂದ ನಾಯ್ಕ, ಕೆ.ಎನ್.ಹೊಸ್ಮನಿ ಇತರರಿದ್ದರು.
ಬ್ಯಾಂಕ್‍ನ ಎಲ್ಲ ಸಾಧನೆಗಳಿಗೆ ಸದಸ್ಯರು ಗ್ರಾಹಕರ ಅಭೂತಪೂರ್ವ ವಿಶ್ವಾಸ ಆಡಳಿತ ಮಂಡಳಿಯ ಸೂಕ್ತ ಮಾರ್ಗದರ್ಶನ ಹಾಗೂ ಸಿಬ್ಬಂದಿ ನಿಷ್ಠಾಪೂರ್ಣ ಕರ್ತವ್ಯ ನಿರ್ವಹಣೆಯೇ ಕಾರಣಜಯದೇವ ನಿಲೇಕಣಿ ಅರ್ಬನ್ ಬ್ಯಾಂಕ್ ಅಧ್ಯಕ್ಷ
ಸನ್ಮಾನ ನಗದು ಬಹುಮಾನ
ಬ್ಯಾಂಕಿನ ಹಿರಿಯ ಸದಸ್ಯರಾದ ವಸಂತ ನೇತ್ರೆಕರ್ ರಾಧಾಬಾಯಿ ಮೆಣಸಿ ದಾಮೋದರ ಭಟ್ ಪ್ರಕಾಶ ಬಂಗ್ಲೆ ವಾಮನ ನಾಡಿಗ ಹಾಗೂ ಮಹಾಬಲೇಶ್ವರ ಭಟ್ ಕಕ್ಕೋಡ ಅವರನ್ನು ಸನ್ಮಾನಿಸಲಾಯಿತು. 25 ವರ್ಷಗಳ ಕಾಯಂ ಸೇವೆ ಸಲ್ಲಿಸಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕಿನ 6 ಸಿಬ್ಬಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಕವಾಗಿ ₹3.08 ಲಕ್ಷ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.