ಉತ್ತರ ಕನ್ನಡ: ‘ಕುಟುಂಬ ಸದಸ್ಯರೊಬ್ಬರ ವಿವಾಹದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಊರಿಗೆ ಬಂದಿದ್ದೆ. ದೇಶದ ಗಡಿಯಲ್ಲಿ ಸಮರ ನಡೆಯುತ್ತಿರುವ ಕಾರಣ ಪುನಃ ಕರ್ತವ್ಯಕ್ಕೆ ಸೇರಿಕೊಳ್ಳುವೆ. ಸಂಭ್ರಮಕ್ಕಿಂತ ಸಮರದಲ್ಲಿ ಎದುರಾಳಿ ಮಣಿಸುವುದು ನಮ್ಮ ಮೊದಲ ಆದ್ಯತೆ’
ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್) ಯೋಧರಾಗಿರುವ ಕುಮಟಾ ತಾಲ್ಲೂಕಿನ ಬಾಡ ಗ್ರಾಮದ ಗುರುಪ್ರಸಾದ ನಾಯ್ಕ ಸ್ಫುಟವಾಗಿ ಹೇಳಿದ್ದು ಹೀಗೆ. ಗುಜರಾತ್‌ನ ಕಛ್ ಸಮೀಪ ಭಾರತ–ಪಕಿಸ್ತಾನ ಗಡಿಯಲ್ಲಿ ಅವರು ಕಾರ್ಯನಿರ್ವಹಿಸುವ ಯೋಧ. ಮೇ 11 ರಂದು ಚಿಕ್ಕಪ್ಪನ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಕೆಲ ದಿನದ ಹಿಂದೆ ಊರಿಗೆ ಬಂದಿದ್ದರು. ತುರ್ತು ಕರೆ ಬಂದ ಕಾರಣ ಭಾನುವಾರ ಕಛ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
‘ಸೇನೆಯಲ್ಲಿ 15 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಗಡಿಯಲ್ಲಿ 200 ಮೀಟರ್ ಅಂತರದಲ್ಲಿ ಪಾಕ್ ಸೈನಿಕರು ಓಡಾಡುವುದು ನಮಗೆ ಕಾಣುತ್ತದೆ. ಯುದ್ಧ ಸಂದರ್ಭದಲ್ಲಿ ಎರಡೂ ಕಡೆಯವರು ಒಬ್ಬರಿಗೊಬ್ಬರು ಕಾಣದಂತೆ ಮರೆಯಲ್ಲಿ ಇರುತ್ತೇವೆ. ಈಗ ಗಡಿಯಲ್ಲಿ ಕೆಲಸ ಮಾಡುವಾಗ ಆತಂಕ ಇದ್ದೇ ಇದೆ. ಕುಟುಂಬದವರಿಗೆ ಸಮಾಧಾನ ಮಾಡಿ ಧರ್ಯದಿಂದ ಇರುವಂತೆ ಮನವೋಲಿಸಿ ಕರ್ತವ್ಯಕ್ಕೆ ತೆರಳುವುದು ಅನಿವಾರ್ಯ’ ಎಂದರು.
ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ಮಣಿಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೊಯಿಡಾದ ಮಂಜುನಾಥ ನಿತೀನ್ ಡೋಂಗ್ರೆ ಅವರೂ ರಜೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಶುಕ್ರವಾರ ಕರ್ತವ್ಯಕ್ಕೆ ತೆರಳಿದ್ದಾರೆ. ಅವರನ್ನು ಕುಟುಂಬಸ್ಥರು, ಗ್ರಾಮಸ್ಥರು ಯುದ್ಧದಲ್ಲಿ ಜಯಶಾಲಿಯಾಗಿ ಬರುವಂತೆ ಹಾರೈಸುವ ಮೂಲಕ ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.
ಕೇವಲ 10 ದಿನದ ಹಿಂದೆ ಮದುವೆಯಾಗಿರುವ ಸಿದ್ದಾಪುರ ಪಟ್ಟಣದ ಹೊಸೂರಿನ ಜಯವಂತ ವಿ.ಎಸ್. ಕೂಡ ರಜೆಯನ್ನು ಮೊಟಕುಗೊಳಿಸಿ, ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸಿದ್ದಾರೆ. ಛತ್ತೀಸಗಢದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಅವರಿಗೆ ರಾಜಸ್ಥಾನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.
ಪಟ್ಟಣದ ಸಮೀಪದ ಕನ್ನಳ್ಳಿಯ ಮಹಾದೇವ ಕೆ.ನಾಯ್ಕ ಅಣ್ಣನ ಮಗಳ ಮದುವೆಗಾಗಿ 15 ದಿನದ ಹಿಂದೆ ಊರಿಗೆ ಬಂದಿದ್ದರು. ಸೈನ್ಯದಿಂದ ದೆಹಲಿಗೆ ಬರುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಅವರೂ ಕರ್ತವ್ಯಕ್ಕೆ ಮರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.