ಮುಂಡಗೋಡ: ‘ತಾಲ್ಲೂಕಿನ ಟಿಬೆಟನ್ ಕ್ಯಾಂಪಿಗೆ ದೆಹಲಿಯಿಂದ ಬಂದಿದ್ದ 30 ವರ್ಷದ ಪುರುಷನಲ್ಲಿ ಮಂಗಳವಾರ ಕೋವಿಡ್ 19 ದೃಢಪಟ್ಟಿದೆ. ಜೂನ್ 7ರಂದು ದೆಹಲಿಯಿಂದ ಬಂದಿದ್ದ ಅವರು, ಟಿಬೆಟನ್ ಕ್ಯಾಂಪಿನ ಟಿ.ಸಿ.ವಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಆಗಿದ್ದರು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.
ಇದೇ 10ರಂದು ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಸೋಂಕಿತನ ಜೊತೆ ಪತ್ನಿಯೂ ಬಂದಿದ್ದು, ಅವರ ವರದಿ ಬರುವುದು ಬಾಕಿಯಿದೆ. ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು, ಅಲ್ಲಿಂದ ರೈಲ್ವೆ ಮೂಲಕ ಹುಬ್ಬಳ್ಳಿಗೆ, ಅಲ್ಲಿಂದ ಕಾರಿನ ಮೂಲಕ ಟಿಬೆಟನ್ ಕ್ಯಾಂಪ್ ತಲುಪಿದ್ದಾರೆ ಎನ್ನಲಾಗಿದೆ. ಕಾರಿನ ಚಾಲಕನನ್ನು ಗುರುತಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
ತಹಶೀಲ್ದಾರ್ ಶ್ರೀಧರ ಮುಂದಲಮನಿ ಹಾಗೂ ತಾಲ್ಲೂಕುಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ ಟಿ.ಸಿ.ವಿ ವಸತಿ ನಿಲಯದ ಕ್ವಾರಂಟೈನ್‍ಗೆ ಭೇಟಿ ನೀಡಿ, ಸೋಂಕಿತನನ್ನು ಕಾರವಾರದ ಆಸ್ಪತ್ರೆಗೆ ಕಳುಹಿಸಿದರು.
ಈ ಹಿಂದೆ ಮಹಾರಾಷ್ಟ್ರದಿಂದ ತಾಲ್ಲೂಕಿಗೆ ಬಂದಿದ್ದ ಎಂಟು ವರ್ಷದ ಬಾಲಕ ಹಾಗೂ 24 ವರ್ಷದ ಯುವಕನಲ್ಲಿ ಮೇ 18ರಂದು ಸೋಂಕು ದೃಢಪಟ್ಟಿತ್ತು. ಅವರಿಬ್ಬರೂ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಟಿಬೆಟನ್ ಕ್ಯಾಂಪ್‍ನಲ್ಲಿ ಮೊದಲನೆಯ ಹಾಗೂ ತಾಲ್ಲೂಕಿನ ಮೂರನೇ ಪ್ರಕರಣ ಇದಾಗಿದೆ.
ಟಿಬೆಟನ್ ಕ್ಯಾಂಪ್‍ನಲ್ಲಿ ಸದ್ಯ 38 ಟಿಬೆಟನ್ನರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ. ಬೆಂಗಳೂರು ಹಾಗೂ ಹೊರ ರಾಜ್ಯಗಳಿಂದ ಬರುವ ಟಿಬೆಟನ್‍ರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.