ADVERTISEMENT

ದನದ ಕಳ್ಳತನ: ನಾಲ್ವರ ಬಂಧನ

ಕಳ್ಳರನ್ನು ಥಳಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 9:45 IST
Last Updated 29 ಫೆಬ್ರುವರಿ 2020, 9:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊನ್ನಾವರ: ತಾಲ್ಲೂಕಿನ ಗುಣವಂತೆಯ ಸಮೀಪ ಮುಗಳಿಯಲ್ಲಿ ಶುಕ್ರವಾರ ಗೋವುಗಳನ್ನು ಕದಿಯುತ್ತಿದ್ದ ತಂಡವೊಂದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು, ಅವರಿಗೆ ಥಳಿಸಿ, ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.

ಭಟ್ಕಳದ ಮಹಮ್ಮದ್ ಅದಿಲ್ ಡುಬ್ಬಾಳ್, ಮಹಮ್ಮದ್ ರಾಹೀನ್, ಮಹಮ್ಮದ್ ರಾಹೀಕ್ ಹಾಗೂ ರಿಜ್ವಾನ್ ಅಬ್ದುಲ್ ರಶೀದ್ ಪಫಾರ್ ಬಂಧಿತ ಆರೋಪಿಗಳು. ‘ಕೆಳಗಿನೂರು ಗ್ರಾಮದ ಅಪ್ಸರಕೊಂಡ, ಮುಗಳಿ, ನಾಜಗಾರ, ಹಕ್ಕಲಕೇರಿ ಮೊದಲಾದೆಡೆಗಳಲ್ಲಿ ಕಳೆದ ಒಂದು ವರ್ಷದಿಂದ ರಾತ್ರಿ ಬೆಳಗಾಗುವುದರೊಳಗೆ ದನಗಳು ನಾಪತ್ತೆಯಾಗುತ್ತಿದ್ದವು. ದನಗಳ ನಾಪತ್ತೆಗೆ ಕಾರಣ ತಿಳಿಯುವ ಯತ್ನದಲ್ಲಿದ್ದ ಗ್ರಾಮಸ್ಥರಿಗೆ ಶುಕ್ರವಾರ ಬೆಳಗಿನ ಜಾವ ಈ ದುಷ್ಕೃತ್ಯ ನಡೆಸುತ್ತಿದ್ದವರು ಸಿಕ್ಕಿಬಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಳ್ಳರನ್ನು ಥಳಿಸಿದರು' ಸ್ಥಳೀಯರೊಬ್ಬರು ತಿಳಿಸಿದರು.

ಶುಕ್ರವಾರ ಮುಗಳಿಯ ಶಾಲೆಯ ಸಮೀಪ ಇದ್ದ ದನವೊಂದಕ್ಕೆ ಮತ್ತು ಬರುವ ಬ್ರೆಡ್ ತಿನ್ನಿಸಿ ಎಚ್ಚರ ತಪ್ಪಿದ ಅದರ ಕೈ ಕಾಲು ಕಟ್ಟಿ ವಾಹನಕ್ಕೆ ತುಂಬುತ್ತಿರುವಾಗ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದರು ಎಂದು ಅವರು ಹೇಳಿದರು. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ಮುಗಳಿಯಲ್ಲಿ ದನದ ಕಳ್ಳತನದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಾಲ್ಲೂಕಿನ ಇತರೆಡೆಗಳಲ್ಲೂ ದನ ನಾಪತ್ತೆ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದ್ದು, ದೂರು ಕೊಟ್ಟರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಮೇಯಲು ಹೋಗಿದ್ದ ದನವೊಂದು ಮನೆಗೆ ಬರಲಿಲ್ಲ. ಹುಡುಕಿದರೂ ಸಿಗದಿದ್ದಾಗ ಹೊನ್ನಾವರ ಪೊಲೀಸರಿಗೆ ದೂರು ನೀಡಿದೆ. ಪೊಲೀಸರು ದೂರಿಗೆ ಸ್ಪಂದಿಸಲಿಲ್ಲ. ದನ ಕದಿಯುತ್ತಿದ್ದವರನ್ನು ಗ್ರಾಮಸ್ಥರೇ ಹಿಡಿದುಕೊಟ್ಟರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಘಟನೆ ನಡೆದಾಗ ಒತ್ತಡಕ್ಕೆ ಮಣಿಯದೇ ಆರೋಪಿಗಳನ್ನು ಬಂಧಿಸದಿದ್ದರೆ ಇಂಥ ಘಟನೆ ಮರುಕಳಿಸುತ್ತಿರಲಿಲ್ಲ' ಎಂದು ಹೆರಾವಲಿ ಗ್ರಾಮದ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.