ಕುಮಟಾ: ‘ನಮ್ಮ ಹಿರಿಯರು ಸಾಕಷ್ಟು ಶ್ರಮಿಸಿದ್ದರಿಂದ ನಾವು ಇಂದು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ. ನಾವು ಅನುಭವಿಸಿದ್ದಕ್ಕಿಂತ ಉತ್ತಮ ವಾತಾವರಣವನ್ನು ನಮ್ಮ ಎಳೆಯರಿಗೆ ಬಿಟ್ಟು ಹೋಗಬೇಕಾದದ್ದು ನಮ್ಮ ಕರ್ತವ್ಯ’ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶನಿವಾರ ಕುಮಟಾ ರೋಟರಿ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ‘ಪ್ರೇರಣಾ ಪುರಸ್ಕಾ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಒಬ್ಬ ಸಾಮಾನ್ಯ ಮಹಿಳೆ ಮನೆಯಿಂದ ಹೊರ ಬರುವುದರಿಂದ ಆರಂಭಿಸಿ ತನ್ನ ಕನಿಷ್ಠ ಅಗತ್ಯಗಳಿಗೂ ಹೋರಾಟ ಮಾಡಿಯೇ ಗೆಲ್ಲಬೇಕಾಯಿತು. ಗಂಡು-ಹೆಣ್ಣು ಸಮಾನ ಎನ್ನುವ ಮನಸ್ಥಿತಿಯನ್ನು ಎಳೆಯರಲ್ಲಿ ನಿರ್ಮಿಸಲು ಎಲ್ಲರೂ ಕಾಳಜಿ ವಹಿಸಬೇಕು’ ಎಂದರು.
ರಾಷ್ಟ್ರೀಯ ಚೆಸ್ ಆಟಗಾರ್ತಿ, ಕುಮಟಾದ ವಿದ್ಯಾರ್ಥಿನಿ ಸಿಂಚನಾ ಭಟ್ಟ, ಸಾಮಾಜಿಕ ಕಾರ್ಯಕರ್ತೆ ಹೊನ್ನಾವರದ ಸಿಸ್ಟರ್ ಮರಿಯಾ ಗೊರಟ್ಟಿ, ಭಟ್ಕಳ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್, ಜಲ ಗೌರಿ ಖ್ಯಾತಿಯ ಶಿರಸಿಯ ಗೌರಿ ನಾಯ್ಕ ಹಾಗೂ ರುದ್ರ ವೀಣೆ ಕಲಾವಿದೆ ಜ್ಯೋತಿ ಹೆಗಡೆ, ಕ್ರೀಡಾ ಸಾಧಕಿ ಕಾರವಾರದ ನಮಿತಾ ಸಾರಂಗ ಅವರಿಗೆ ‘ಪ್ರೇರಣಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಮಹಿಳಾ ಸಾಧಕರು ಅನಿಸಿಕೆ ವ್ಯಕ್ತಪಡಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಅತುಲ್ ಕಾಮತ್, ‘ಸಮಾಜಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಮಹಿಳೆಯರ ಶಕ್ತಿಯನ್ನು ಗುರುತಿಸಿ ಗೌರವಿಸುವುದಕ್ಕೆ ರೋಟರಿ ಕ್ಲಬ್‌ಗೆ ಅತೀವ ಹೆಮ್ಮೆಯಾಗುತ್ತಿದೆ’ ಎಂದರು.
ರೋಟರಿ ಹಿರಿಯ ಸದಸ್ಯೆ ಜಯಶ್ರೀ ಕಾಮತ್, ಉಪ ಗವರ್ನರ್ ಸ್ಟಿಫನ್ ರೊಡ್ರಗೀಸ್, ಕಾರ್ಯದರ್ಶಿ ವಿನಾಯಕ ಹೆಗಡೆ,
ಪವನ ಶೆಟ್ಟಿ, ಡಾ. ಶ್ರೀದೇವಿ ಭಟ್, ಸಂಧ್ಯಾ ಹೆಗಡೆ, ದೀಪಾ ನಾಯಕ, ಸುಜಾತಾ ಕಾಮತ್ ಇದ್ದರು.
ಮೀನು ಸಾಕುವ ಮಹಿಳೆಗೆ ಗೌರವ: ತಾಲ್ಲೂಕಿನ ತಂಡ್ರಕುಳಿಯ ಅಘನಾಶಿನಿ ನದಿಯಲ್ಲಿ ಮೀನು ಸಾಕಣೆ ನಡೆಸಿ ಕುಟುಂಬ ನಿರ್ವಹಣೆ ಮಾಡುತ್ತಿರುವ ನಾಗವೇಣಿ ಅಂಬಿಗ ಅವರನ್ನು ಬಿಜೆಪಿ ಕುಮಟಾ ಘಟಕದಿಂದ ಗೌರವಿಸಲಾಯಿತು. ಶಾಸಕ ದಿನಕರ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮತಿ ಭಟ್ಟ, ಸದಸ್ಯೆ ಮೋಹಿನಿ ಗೌಡ, ಗೀತಾ ಮುಕ್ರಿ, ಪಕ್ಷದ ಪದಾಧಿಕಾರಿಗಳಾದ ಅನುರಾಧಾ ಭಟ್ಟ, ಜಯಾ ಶೇಟ್, ರೂಪಾ ಭಂಡಾರಿ, ಎಂ.ಜಿ. ಭಟ್ಟ, ಶಿವಾನಂದ ಹೆಗಡೆ, ಹೇಮಂತ ಗಾಂವ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.