ADVERTISEMENT

ಸಾಂಸ್ಕೃತಿಕ ಪರಿಸರವಿದ್ದರೆ ನಾಡು ಸಮೃದ್ಧ- ವಿಶ್ವೇಶ್ವರ ಹೆಗಡೆ ಕಾಗೇರಿ

ಅನಂತೋತ್ಸವದಲ್ಲಿ ವಿಧಾನಸಭಾ ಅಧ್ಯಕ್ಷ ಕಾಗೇರಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 14:57 IST
Last Updated 30 ಏಪ್ರಿಲ್ 2022, 14:57 IST
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಅನಂತಶ್ರೀ ಪ್ರಶಸ್ತಿಯನ್ನು ತಾಳಮದ್ದಲೆಯ ಪ್ರಸಿದ್ಧ ಅರ್ಥಧಾರಿ ಉಮಾಕಾಂತ ಭಟ್ಟ ಕೆರೆಕೈ ಅವರಿಗೆ ಶಿರಸಿ ತಾಲ್ಲೂಕಿನ ವರ್ಗಾಸರದ ಅಭಿನವ ರಂಗಮಂದಿರದಲ್ಲಿ ಶನಿವಾರ ನಡೆದ ಅನಂತೋತ್ಸವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಅವರ ಪತ್ನಿ ಸುನಂದಾ ಭಟ್ಟ ಜತೆಗಿದ್ದರು. ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ, ಅಧ್ಯಕ್ಷ ವಿ.ಎಂ.ಭಟ್ಟ, ಯಕ್ಷಗಾನ ಕಲಾವಿದ ಅನಂತಮೂರ್ತಿ ಭಟ್ಟ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಚಿತ್ರನಟ ಸುಚೀಂದ್ರ ಪ್ರಸಾದ್, ಉದ್ಯಮಿ ಮೋಹನ ಹೆಗಡೆ ಹೆರವಟ್ಟಾ ಇದ್ದರು

ಶಿರಸಿ: ಸಾಂಸ್ಕೃತಿಕ ಚಟುವಟಿಕೆ ಪರಿಣಾಮಕಾರಿಯಾಗಿ ಆಚರಿಸುವ ನಾಡು ಸಮೃದ್ಧವಾಗಿರಬಲ್ಲದು ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕಿನ ಪುಟ್ಟನಮನೆಯ ಅಭಿನವ ರಂಗಮಂದಿರದಲ್ಲಿ ಶನಿವಾರ ಸಿದ್ದಾಪುರದ ಅನಂತ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಅನಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೊಬೈಲ್ ಗೀಳು ಸಮಾಜದಲ್ಲಿ ಭಾವನಾತ್ಮಕ ಕಂದಕ ಸೃಷ್ಟಿಸುತ್ತಿದೆ. ಅದನ್ನು ಹೋಗಲಾಡಿಸಿ ಒಗ್ಗೂಡುವಿಕೆಯ ವಾತಾವರಣ ನಿರ್ಮಿಸಲು ಯಕ್ಷಗಾನ, ತಾಳಮದ್ದಲೆಯಂತಹ ಪಾರಂಪರಿಕ ಕಲೆಗಳಿಗೆ ಸಾಧ್ಯವಿದೆ’ ಎಂದರು.

ADVERTISEMENT

‘ಅನಂತಶ್ರೀ ಪ್ರಶಸ್ತಿ’ಯನ್ನು ತಾಳಮದ್ದಲೆಯ ಅರ್ಥದಾರಿ ಉಮಾಕಾಂತ ಭಟ್ಟ ಕೆರೆಕೈ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ‘ಜನರ ಪ್ರೀತಿ ಮಾತನ್ನು ಬದುಕಿಸಿದೆ. ಕೌಶಲ ಮತ್ತು ಸಾಮರ್ಥ್ಯ ಒದಗಿಸಿದ ಅನಂತ ಹೆಗಡೆ ಕೊಳಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿದ್ದು ಸ್ಮರಣೀಯ ಅನುಭವ’ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಚಿತ್ರ ನಟ ಸುಚೀಂದ್ರ ಪ್ರಸಾದ್ ಮಾತನಾಡಿ, ‘ಪರಂಪರೆ ಕಾಪಾಡುವ ಕೆಲಸಗಳು ನಿರಂತರತೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಸಮರ್ಥರು, ಅರ್ಹರಿಗೆ ದೊರೆಯುವ ಸನ್ಮಾನಗಳು ಬರುವ ತಲೆಮಾರಿಗೆ ಪಥದರ್ಶಿಯಾಗಬಲ್ಲವು’ ಎಂದರು.

‘ಪ್ರಜಾವಾಣಿ’ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಭಿನಂದನಾ ನುಡಿಗಳನ್ನು ಆಡಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಉದ್ಯಮಿ ಮೋಹನ ಹೆಗಡೆ ಹೆರವಟ್ಟಾ, ಆರ್.ಜಿ.ಭಟ್ಟ ವರ್ಗಾಸರ, ದತ್ತಮೂರ್ತಿ ಭಟ್ಟ, ವಿ.ಎಂ.ಭಟ್ಟ ಕೊಳಗಿ, ಕೇಶವ ಹೆಗಡೆ ಕೊಳಗಿ ಇದ್ದರು.

ಕಾಶ್ಯಪ ಪರ್ಣಕುಟಿ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಭಾ ಕಾರ್ಯಕ್ರಮ ಬಳಿಕ ಚಂದ್ರಹಾಸ ಚರಿತೆ ಯಕ್ಷಗಾನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.