ಜೊಯಿಡಾ: ತಾಲ್ಲೂಕನ್ನು ಜಿಲ್ಲಾಕೇಂದ್ರದೊಂದಿಗೆ ಸಂಪರ್ಕಿಸುವ, ನಿತ್ಯ ನೂರಾರು ವಾಹನಗಳು ಸಂಚರಿಸುವ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿ–34 ಸಂಪೂರ್ಣ ಹದಗೆಟ್ಟಿದೆ. ಇದರಿಂದ ವಾಹನ ಸವಾರರಲ್ಲಿ ಸುರಕ್ಷಿತ ಸಂಚಾರದ ಭರವಸೆ ಕಮರಿದೆ.
ರಾಜ್ಯ ಹೆದ್ದಾರಿ ತಾಲ್ಲೂಕಿನ ಡೋಕ್ರಪ್ಪಾ ಕ್ರಾಸ್‌ನಿಂದ ಜೊಯಿಡಾ ತಾಲ್ಲೂಕು ಗಡಿಯ ಬರಪಾಲಿಯವರೆಗೆ ಸುಮಾರು 10 ಕಿ.ಮೀ ಸಂಪೂರ್ಣ ಹಾಳಾಗಿದ್ದು ರಸ್ತೆಯುದ್ದಕ್ಕೂ ಗುಂಡಿಗಳೇ ತುಂಬಿಕೊಂಡಿವೆ. ಮಾಸೇತ, ನುಜ್ಜಿ, ನಿಗುಂಡಿ ಮತ್ತು ಬಾಡಪೋಲಿ ಗ್ರಾಮದ ಜನರು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
‘ಹೆದ್ದಾರಿ ಸಂಪೂರ್ಣ ಹೊಂಡಗಳಿಂದ ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುತ್ತ ಸಾಗಬೇಕಾಗುತ್ತಿದೆ. ಮಳೆ ಬಂದರೆ ಕೆಸರು, ಬಿಸಿಲಿನ ವಾತಾವರಣದಲ್ಲಿ ದೂಳಿನ ಸಮಸ್ಯೆ ಬಾಧಿಸುತ್ತಿದೆ. ಮಳೆ ನೀರು ನಿಂತು ಕೆಲವೊಮ್ಮೆ ಗುಂಡಿಗಳ ಆಳ ಅರಿಯಲಾಗದೆ ಅಪಘಾತಗಳು ಸಹ ಸಂಭವಿಸುತ್ತಿದೆ’ ಎಂಬುದು ಈ ಮಾರ್ಗದಲ್ಲಿ ಸಾಗುವ ಸವಾರರ ದೂರು.
‘15 ವರ್ಷಗಳ ಹಿಂದೆ ಈ ರಾಜ್ಯ ಹೆದ್ದಾರಿ ಗುಂಡಾಳಿಯಿಂದ ಬರಪಾಲಿಯವರೆಗೆ ಸಂಪೂರ್ಣ ಹಾಳಾಗಿದ್ದರಿಂದ ಖಾಸಗಿ ವಾಹನಗಳು ಮತ್ತು ಪ್ರಯಾಣಿಕರ ಖಾಸಗಿ ಟೆಂಟೊಗಳು ಈ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಆಗ ಈ ಭಾಗದ ಹತ್ತಾರು ಹಳ್ಳಿಗಳ ಜಜನರು ಪೇಟೆಯತ್ತ ಸಾಗಲು ಪರದಾಡಬೇಕಾಗಿತ್ತು. ರಸ್ತೆ ಸರಿಪಡಿಸದಿದ್ದರೆ ಈಗಲೂ ಅಂತಹ ಸ್ಥಿತಿ ಮರುಕಳಿಸಬಹುದು’ ಎನ್ನುತ್ತಾರೆ ಅಣಶಿಯ ಅಲ್ಕೇಶ ದೇಸಾಯಿ.
‘ರಸ್ತೆ ಅಭಿವೃದ್ಧಿ ಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು ಆಗ್ರಹಿಸುತ್ತಿಲ್ಲ. ಪ್ರತಿ ದಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೊಯಿಡಾ, ಕುಂಬಾರವಾಡಾ ಸೇರಿದಂತೆ ಹಲವು ಕಡೆಗಳಲ್ಲಿ ಶಾಲಾ ಕಾಲೇಜುಗಳಿಗೆ ಬಸ್ಸುಗಳಲ್ಲಿ ತೆರಳುತ್ತಾರೆ. ರಸ್ತೆ ಅವ್ಯವಸ್ಥೆ ಅವರ ಕಲಿಕೆಯ ಮೇಲೆ ಸಹ ಪರಿಣಾಮ ಬೀರುತ್ತಿದೆ’ ಎಂಬುದು ಅಣಶಿ ಭಾಗದ ಜನರ ದೂರು.
ಸದಾಶಿವಗಡ -ಔರಾದ್ ರಾಜ್ಯ ಹೆದ್ದಾರಿಯ 10 ಕಿ.ಮೀ ಅಭಿವೃದ್ಧಿ ಪಡಿಸಲು ಎನ್‍ಡಿಆರ್‌ಎಫ್ ಅನುದಾನ ಮಂಜೂರಾಗಿದ್ದು ಮಳೆಗಾಲ ಮುಗಿದ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಬಸವರಾಜ ಎಸ್. ಪಿಡಬ್ಲ್ಯೂಡಿ ಎಇಇ
- ಬಸ್ ನಿಲುಗಡೆಯಾಗದೆ ಸಮಸ್ಯೆ ‘ಹೆದ್ದಾರಿಯ ಅವ್ಯವಸ್ಥೆಯ ಕಾರಣದಿಂದ ಈ ಮಾರ್ಗದಲ್ಲಿ ಸಂಚರಿಸುವ ಹಳ್ಳಿಗಳ ಬಸ್ ತಂಗುದಾಣಗಳ ಬಳಿ ನಿಲುಗಡೆ ಮಾಡುತ್ತಿದ್ದ ಕುಮಟಾ-ಕೋಲ್ಹಾಪುರ ಉಡುಪಿ-ಬೆಳಗಾವಿ ಕಾರವಾರ-ಪಿಂಪ್ರಿ ಮುಂತಾದ ಬಸ್‍ಗಳನ್ನು ಸಮಯದ ಅಭಾವದ ಕಾರಣ ನೀಡಿ ನಿಲುಗಡೆ ಮಾಡುತ್ತಿಲ್ಲ. ಬಾಡಿಗೆ ವಾಹನಗಳ ಚಾಲಕರು ಈ ಮಾರ್ಗವಾಗಿ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಇತರ ತುರ್ತು ಕೆಲಸಕ್ಕೆ ಸಾಗುವ ಹಳ್ಳಿ ಜನರಿಗೆ ಸಮಸ್ಯೆ ಆಗುತ್ತಿದೆ’ ಎಂದು ಅಣಶಿಯ ವಿನೋದ ದೇಸಾಯಿ ಮತ್ತು ಭಾರಾಡಿಯ ಸುಭಾಷ ವೇಳಿಪ ಸಮಸ್ಯೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.