ADVERTISEMENT

ದಾಂಡೇಲಿ: ಇದ್ದೂ ಇಲ್ಲವಾದ ಇಎಸ್ಐ ಆಸ್ಪತ್ರೆ

ನಿರ್ವಹಣೆಗೆ ಒಬ್ಬರೇ ವೈದ್ಯರು, ಗಂಭೀರ ಕಾಯಿಲೆಗೆ ಹೊರ ಜಿಲ್ಲೆಗೆ ಅಲೆದಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 4:53 IST
Last Updated 2 ಜೂನ್ 2025, 4:53 IST
ದಾಂಡೇಲಿಯ ಇಎಸ್ಐ ಆಸ್ಪತ್ರೆ
ದಾಂಡೇಲಿಯ ಇಎಸ್ಐ ಆಸ್ಪತ್ರೆ   

ದಾಂಡೇಲಿ: ಕೈಗಾರಿಕೋದ್ಯಮ ನಗರವಾದ ದಾಂಡೇಲಿಯಲ್ಲಿರುವ ಕಾರ್ಮಿಕರ ರಾಜ್ಯ ವಿಮಾ (ಇಎಸ್ಐ) ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಕಾರ್ಮಿಕರಿಗೆ ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರು ಹೆಚ್ಚುತ್ತಿದೆ.

ನಗರದ ಕೇಂದ್ರ ಭಾಗದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರು ಆಸ್ಪತ್ರೆಯ ಎಲ್ಲ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುವ ಅನಿವಾರ್ಯ ಉಂಟಾಗಿದೆ. ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ ಕಾರ್ಮಿಕರಿಗೆ ಇಲ್ಲಿ ಚಿಕಿತ್ಸೆ ಸಿಗದೆ, ದೂರದ ಹುಬ್ಬಳ್ಳಿಗೆ ಹೋಗುವ ಸ್ಥಿತಿ ಇದೆ.

ಇಎಸ್ಐ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದೆ. ವೈದ್ಯಕೀಯೇತರ ಸಿಬ್ಬಂದಿ ಇದ್ದಾರೆ. ಆದರೆ, ವೈದ್ಯಾಧಿಕಾರಿಗಳೇ ಇಲ್ಲದ ಪರಿಣಾಮ ಆಸ್ಪತ್ರೆ ಕಾರ್ಮಿಕರ ಪಾಲಿಗೆ ಇದ್ದೂ ಇಲ್ಲದ ಸ್ಥಿತಿಯಲ್ಲಿದೆ.

ADVERTISEMENT

‘ಅರಿವಳಿಕೆ ತಜ್ಞರು ಮಾತ್ರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ತಜ್ಞರು, ಶಸ್ತ್ರಚಿಕಿತ್ಸಕರು, ಮೂಳೆರೋಗ ತಜ್ಞರು, ಸ್ತ್ರೀರೋಗ ತಜ್ಞರ ನೇಮಕವಾಗಬೇಕು. ಆಸ್ಪತ್ರೆಯಲ್ಲಿ 16 ಸ್ಟಾಫ್ ನರ್ಸ್ ಇರಬೇಕಿತ್ತು. ಅದರಲ್ಲಿ 8 ಜನ ಕಾಯಂ ನರ್ಸ್‌ಗಳಿದ್ದು, 5 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪ್ರಯೋಗಾಲಯಕ್ಕೆ ಒಬ್ಬರು ಗುತ್ತಿಗೆ ಆಧಾರದಲ್ಲಿದ್ದು ಇನ್ನೊಬ್ಬರ ನೇಮಕವಾಗಬೇಕು. ಔಷಧ ವಿತರಣೆ, ಲ್ಯಾಬ್ ವಿಭಾಗಕ್ಕೆ ಇಬ್ಬರು ಸಿಬ್ಬಂದಿ ಅವಶ್ಯಕತೆ ಇದೆ. ಎಕ್ಸ್ ರೇ ಯಂತ್ರ ಇದ್ದರೂ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ’ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲಸಕ್ಕೆ ರಜೆ ಹಾಕಿ ಚಿಕಿತ್ಸೆಗೆಂದು ಬಂದಾಗ ಇರುವ ಒಬ್ಬ ವೈದ್ಯರು ರಜೆ ಮೇಲೆ ಹೋಗಿದ್ದರು. ಶುಶ್ರೂಷಕಿಯರೇ ಚಿಕಿತ್ಸೆ ನೀಡಬೇಕಾಯಿತು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೆ ಮಾತ್ರ ಚಿಕಿತ್ಸೆ ಸಿಗುತ್ತಿದೆ. ಅವಘಡ ಸಂಭವಿಸಿದರೆ ಚಿಕಿತ್ಸೆಗೆ ಪರದಾಡಬೇಕಾಗುತ್ತದೆ’ ಎಂದು ಕಾರ್ಮಿಕರೊಬ್ಬರು ದೂರಿದರು.

‘ಕಾರ್ಮಿಕರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಸಕಾಲಕ್ಕೆ ಸಿಗಬೇಕು. ಆದಷ್ಟು ಬೇಗನೆ ಅಗತ್ಯವಿರುವ ವೈದ್ಯರನ್ನು ಸರ್ಕಾರ ನೇಮಕ ಮಾಡಬೇಕು’ ಎಂದು ಸ್ಥಳೀಯ ಕಾರ್ಮಿಕ ಗುತ್ತಿಗೆದಾರ ಮೋಹನ ಹಲವಾಯಿ ಒತ್ತಾಯಿಸಿದರು.

ಮೂರು ತಿಂಗಳಿಂದ ರಜೆ ಹಾಕದೆ ಕರ್ತವ್ಯ ಮಾಡುತ್ತಿರುವೆ. ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಡಾ.ಸೈಯದ್ ಗೌಸ್ ಸಾಬ್ ಇಎಸ್ಐಸಿ ಆಸ್ಪತ್ರೆ ವೈದ್ಯ

ಆಸ್ಪತ್ರೆ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರು

‘ಚಿಕಿತ್ಸೆಗೆ ಬರುವ ಕಾರ್ಮಿಕರಿಗೆ ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ರೆಸಾರ್ಟ್‌ಗಳು ಸಣ್ಣಪುಟ್ಟ ಕೈಗಾರಿಕೆಯಲ್ಲಿ ದುಡಿಯುವ ಕಾರ್ಮಿಕರು ಸೇರಿದಂತೆ ಸುಮಾರು 4000ಕ್ಕೂ ಹೆಚ್ಚು ಕಾರ್ಮಿಕರು ಈ ಆಸ್ಪತ್ರೆ ವ್ಯಾಪ್ತಿಯಲ್ಲಿ ಬರುತ್ತಾರೆ. ಕಾರವಾರ ಸೇರಿದಂತೆ ವಿವಿಧೆಡೆಗಳಿಂದಲೂ ಕಾರ್ಮಿಕರು ಇದೇ ಆಸ್ಪತ್ರೆ ಅವಲಂಭಿಸಿದ್ದಾರೆ’ ಎಂದರು ಸ್ಥಳೀಯ ಕಾರ್ಮಿಕ ಮುಖಂಡರೊಬ್ಬರು. ‘ಕಳೆದ ನಾಲ್ಕು ವರ್ಷಗಳಿಂದ ಇಎಸ್ಐ ಆಸ್ಪತ್ರೆಗೆ ಯಾವುದೇ ವೈದ್ಯರ ನೇಮಕವಾಗಿಲ್ಲ. ಕಾರ್ಮಿಕರು ಗಂಭೀರ ಕಾಯಿಲೆಗಳಿಗೆ ತುತ್ತಾದರೆ ಖಾಸಗಿ ಆಸ್ಪತ್ರೆ ಅವಲಂಭಿಬೇಕು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಧಾರವಾಡಕ್ಕೆ ಹೋಗಬೇಕು’ ಎಂದೂ ಸಮಸ್ಯೆ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.