ದಾಂಡೇಲಿ: ‘ರಾಜಕೀಯತೆ ಮರೆತು ಎಲ್ಲರನ್ನು ಒಳಗೊಳ್ಳುವ ಸಮ್ಮೇಳನಗಳು ನಡೆಯಬೇಕು. ಆಗ ಸಾಮಾಜಿಕ ಬದಲಾವಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ಇಂಗ್ಲಿಷ್ ಮಾಧ್ಯಮ ಎನ್ನುವ ಭೂತ ಎಲ್ಲರ ಮನಸಿನಿಂದ ಹೊರ ಹೋಗಬೇಕು. ಮನೆ ಮನಗಳಲ್ಲಿ ಕನ್ನಡ ತುಂಬಬೇಕು’ ಎಂದು ಧಾರವಾಡ ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ಉತ್ತರ ಕನ್ನಡ ಜಿಲ್ಲಾ ಕಸಾಪ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ತಾಲ್ಲೂಕಿನ ಆಲೂರಿನಲ್ಲಿ ಶುಕ್ರವಾರ ನಡೆದ ದಾಂಡೇಲಿ ತಾಲ್ಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಇಂದು ನಾವು ಮಕ್ಕಳನ್ನು ಒತ್ತಡದಲ್ಲಿ ಇಟ್ಟಿದ್ದೇವೆ. ಅಂಕ, ಇಂಗ್ಲಿಷ್ ಮಾಧ್ಯಮದ ಹಿಂದೆ ಬಿದ್ದು ಮಕ್ಕಳಿಗೆ ಮನೋವೈಜ್ಞಾನಿಕ ಚಿಂತನ ಶಕ್ತಿ ಕಳೆದುಹಾಕಿದ್ದೇವೆ. ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ಪಾಲಕರ ಮನಸ್ಥಿತಿಯೇ ಕಾರಣ. ಕನ್ನಡ ತನ್ನ ಅಸ್ತಿತ್ವಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ ಯು.ಎಸ್.ಪಾಟೀಲ ಮಾತನಾಡಿ, ‘ನನ್ನ ವೃತ್ತಿ ಬದುಕಿನೊಂದಿಗೆ ದಾಂಡೇಲಿ ಜೀವನ ಬೆರೆತು ಹೋಗಿದೆ. ಕನ್ನಡದ ಸಾಹಿತ್ಯ ಸಮ್ಮೇಳನ ಹಳ್ಳಿಯ ಅಂಗಳಕ್ಕೆ ಬಂದಿದ್ದು ಸಂತಸ ತಂದಿದೆ’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ‘ಗ್ರಾಮೀಣ ಬದುಕನ್ನು ಸಾಹಿತ್ಯಕ್ಕೆ ಹಾಗೂ ಗ್ರಾಮೀಣರಿಗೆ ಸಾಹಿತ್ಯ ಪರಿಚಯಿಸುವ ಉದ್ದೇಶದಿಂದ ಈ ಬಾರಿ ಗ್ರಾಮೀಣ ಭಾಗದಲ್ಲಿ ಸಮ್ಮೇಳನ ಮಾಡುತ್ತಿದ್ದೇವೆ. ಸಾಹಿತ್ಯದ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುದಾನ ಕೊರತೆ ಇದೆ. ಆದರೂ ಜಿಲ್ಲೆಯಲ್ಲಿ ತಿಂಗಳಿಗೆ ಎರಡು ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಶೇಖ ದ್ವಾರಗಳನ್ನು ಉದ್ಘಾಟಿಸಿದರು.
ಆಲೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ ಜಹಾನ್ ನದಾಫ ಪುಸ್ತಕ ಮಳಿಗೆ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಲ್. ಜಮಾದಾರ ಸಮ್ಮೇಳನಾಧ್ಯಕ್ಷ ಯು.ಎಸ್. ಪಾಟೀಲ ಅವರಿಗೆ ಧ್ವಜ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶೈಲೇಶ ಪರಮಾನಂದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ. ಹಾದಿಮನಿ , ಪೌರಾಯುಕ್ತ ವಿವೇಕ ಬನ್ನೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ನಾಯ್ಕ, ಎಸಿಎಫ್ ಸಂತೋಷ ಚವ್ಹಾಣ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ ಜೆ.ಆರ್., ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಾಮನ್ ಮಿರಾಶಿ, ಗಿರೀಶ ಠೋಸೂರ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹುಸೂರು ಇದ್ದರು.
ಉಪನ್ಯಾಸಕ ಎನ್.ವಿ.ಪಾಟೀಲ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ನಾಗೇಶ ನಾಯಕ ದ್ವಾರಗಳನ್ನು ಪರಿಚಯಿಸಿದರು. ಗುರುಶಾಂತ ಜಡೆಹಿರೇಮಠ ಸಂದೇಶ ವಾಚಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಸ್ವಾಗತಿಸಿದರು. ಆಶಾದೇಶ ಭಂಡಾರಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ನಾಯಕ ವಂದಿಸಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಆಲೂರಿನ ಗ್ರಾಮ ದೇವತೆ ಲಕ್ಷ್ಮೀದೇವಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ವಿಠ್ಠಲ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಹಿಳೆಯರ ಪೂರ್ಣ ಕುಂಭ, ಭಜನೆ, ಶಾಲಾ ಮಕ್ಕಳ ಛದ್ಮವೇಷಗಳು ಮೆರವಣಿಗೆಗೆ ಕಳೆ ತಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.