ಗಣಪತಿ ದೇವಸ್ಥಾನದ ಆವರಣದಿಂದ ಬಾಣ ಬಿಡುವ ಮೂಲಕ ಬನ್ನಿ ಮುಡಿಯುವುದಕ್ಕೆ ಚಾಲನೆ ನೀಡುವುದು
ಮುಂಡಗೋಡ: ಇಲ್ಲಿನ ಹಳೂರಿನ ಆಂಜನೇಯ ದೇವಸ್ಥಾನದಲ್ಲಿ ದಸರಾ ಆಚರಣೆ ವಿಶೇಷವಾಗಿರುತ್ತದೆ. ಬಿಲ್ಲುಬಾಣಕ್ಕೆ ಪೂಜೆ ಸಲ್ಲಿಸುವುದು, ದಕ್ಷಿಣದ ದಿಕ್ಕು ಹೊರತುಪಡಿಸಿ, ಇನ್ನುಳಿದ ಮೂರು ದಿಕ್ಕುಗಳಲ್ಲಿ ಬಾಣ ಬಿಟ್ಟ ನಂತರವಷ್ಟೇ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡುವುದು, ರಕ್ಷಕ ದೇವತೆಗಳಿಗೆ ಗಂಗಾಪೂಜನ ಮಾಡುವುದು ಇಲ್ಲಿನ ವಿಶೇಷ.
ವಿಜಯದಶಮಿ ದಿನ ಆಂಜನೇಯ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆಯು, ಅರಸಪ್ಪ ನಾಯಕ ನಿರ್ಮಿತ ಇಲ್ಲಿನ ಅಮ್ಮಾಜಿ ಅಥವಾ ದೊಡ್ಡಕೆರೆಗೆ ಬರುತ್ತದೆ. ಅಲ್ಲಿ ಗಂಗಾಪೂಜನ ಕಾರ್ಯಕ್ರಮ ಯಡ್ಡಳ್ಳಿ ಮನೆತನದವರ ನೇತೃತ್ವದಲ್ಲಿ ನಡೆಯುತ್ತದೆ. ಈ ಕೆರೆಯಲ್ಲಿ ರಕ್ಷಕ ದೇವತೆಗಳಾದ ಗಣಪತಿ, ಗೋಪಾಲಕೃಷ್ಣ ನೆಲೆಸಿದ್ದರು ಎಂಬ ನಂಬಿಕೆ ಭಕ್ತರದ್ದು. ಈ ಹಿನ್ನೆಲೆಯಲ್ಲಿ ಇಲ್ಲಿ ದೇವರಿಗೆ ಶುದ್ಧ ಕೊಬ್ಬರಿ ಎಣ್ಣೆಯಿಂದ ಅವಭೃತ ಸ್ನಾನ ಮಾಡಿಸಲಾಗುತ್ತದೆ. ನೆರೆದ ಭಕ್ತರಿಗೂ ಅದನ್ನು ವಿತರಿಸಲಾಗುತ್ತದೆ.
‘ಪಲ್ಲಕ್ಕಿ ಮೆರವಣಿಗೆಯು ಹಳೂರಿನಿಂದ ಆರಂಭಗೊಂಡು, ಬನ್ನಿಕಟ್ಟೆಯ ಮೂಲಗಣಪತಿ ದೇವಸ್ಥಾನಕ್ಕೆ ಬರುತ್ತದೆ. ಇಲ್ಲಿ ಶಮಿ ಪೂಜೆ, ಪತ್ರಿಕಾ ಪೂಜೆ ನಡೆಯುತ್ತದೆ. ನಾಡಿಗೇರ ಮನೆತನದವರು ತಯಾರಿಸಿರುವ ಬಿಲ್ಲು, ಬಾಣಗಳಿಗೆ ಪೂಜೆ ಸಲ್ಲಿಸುವ ಮೂಲಕ ಸೀಮೋಲ್ಲಂಘನ ಕಾರ್ಯಕ್ರಮ ನಡೆಸಲಾಗುತ್ತದೆ. ದಕ್ಷಿಣವು ಯಮಧರ್ಮನ ದಿಕ್ಕು ಆಗಿರುವುದರಿಂದ, ಅದನ್ನು ಹೊರತುಪಡಿಸಿ ಇನ್ನುಳಿದ ಮೂರು ದಿಕ್ಕುಗಳಲ್ಲಿ ಬಾಣವನ್ನು ಬಿಡಲಾಗುತ್ತದೆ’ ಎಂದು ಅರ್ಚಕ ರಾಮಂಚಂದ್ರ ಜೋಶಿ ಹಾಗೂ ರಾಜೇಂದ್ರ ಜೋಶಿ ಹೇಳಿದರು.
ಬನ್ನಿಕಟ್ಟೆಯ ಸನಿಹದಲ್ಲಿರುವ ಮೂಲಗಣಪತಿ ದೇವಸ್ಥಾನದಲ್ಲಿ ಬಿಲ್ಲುಬಾಣ ಸಹಿತ ಪತ್ರಿಕಾ ಪೂಜನ ಮಾಡುತ್ತಿರುವುದು
‘ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಈ ಆಚರಣೆ ನಡೆಯುತ್ತಿದೆ. ಕೆಲವು ದಶಕಗಳ ಹಿಂದೆ ಸೀಮೋಲ್ಲಂಘನ ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದರು. ಇದೊಂದು ಸರ್ಕಾರಿ ದಸರಾ ಎಂದೇ ರೂಢಿಯಲ್ಲಿತ್ತು. ಕಂದಾಯ ಇಲಾಖೆಯ ಶೀಲು ಸಹ ಇಲ್ಲಿ ತಂದು, ಶಮಿ ಪೂಜೆಯ ಜೊತೆಗೆ ಪೂಜಿಸಲಾಗುತ್ತಿತ್ತು. ವರ್ಷಗಳು ಕಳೆದಂತೆ ಕಂದಾಯ, ಪೋಲಿಸ್ ಸಿಬ್ಬಂದಿ ಈ ಆಚರಣೆಯಲ್ಲಿ ಪಾಲ್ಗೊಳ್ಳುವ ರೂಢಿ ನಿಂತಿದೆ. ಆದರೆ, ಸಾಂಕೇತಿಕವಾಗಿ ದಸರಾ ಹಬ್ಬದ ಆಚರಣೆಯ ಕುರಿತು ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ಅರ್ಜಿ ನೀಡುವ ಪದ್ಧತಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.