ADVERTISEMENT

ಅತಿಕ್ರಮಣಕಾರರಿಂದ ಡಿಸಿಎಫ್ ಕಚೇರಿ ಮುತ್ತಿಗೆ

ದೌರ್ಜನ್ಯ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2019, 13:34 IST
Last Updated 25 ಮೇ 2019, 13:34 IST
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರ್ತಿ ಸುಕ್ರಿ ಗೌಡ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರ್ತಿ ಸುಕ್ರಿ ಗೌಡ   

ಶಿರಸಿ: ಅರಣ್ಯ ಅತಿಕ್ರಮಣಕಾರರ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಕಾನಸೂರು ಬಾಳೆಕೈ ಗೀತಾ ನಾಯ್ಕ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ, ಅರಣ್ಯ ಅತಿಕ್ರಮಣಕಾರರು ಶನಿವಾರ ಇಲ್ಲಿ ಡಿಸಿಎಫ್ ಕಚೇರಿಗೆ ಮುತ್ತಿಗೆ ಹಾಕಿದರು.

ಅತಿಕ್ರಮಣದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಹೋರಾಟಗಾರ್ತಿ ಸುಕ್ರಿ ಗೌಡ ಭಾಗವಹಿಸಿದ್ದರು. ಡಿಸಿಎಫ್ ಕಚೇರಿ ಎದುರು ರಸ್ತೆಯಲ್ಲಿ ನಿಂತಿದ್ದ ಅತಿಕ್ರಮಣಕಾರರು, ಕಚೇರಿ ಒಳಪ್ರವೇಶಿಸಿಲು ಯತ್ನಿಸಿದಾಗ, ಸಿಪಿಐ ಬಿ. ಗಿರೀಶ ನೇತೃತ್ವದಲ್ಲಿ ಪೊಲೀಸರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಭಟ್ಕಳದ ರಾಮಾ ಮೊಗೇರ ಮಾತನಾಡಿ, ‘ಶೇ 80ರಷ್ಟು ಅರಣ್ಯವಿರುವ ಜಿಲ್ಲೆಯಲ್ಲಿ ನಾವು ಸಣ್ಣ ಅತಿಕ್ರಮಣ ಮಾಡಿ ಬದುಕುವುದು ಅನಿವಾರ್ಯ. ಅತಿಕ್ರಮಣದಲ್ಲಿ ಬದುಕದೇ ಅರಣ್ಯ ಇಲಾಖೆ ಕಚೇರಿಗೆ ಬಂದು ಉಳಿಯಲು ಸಾಧ್ಯವಾ ? ಅಧಿಕಾರಿಗಳು ಮನುಷ್ಯತ್ವ ಹೊಂದಿರಬೇಕು. ಗುಡಿಸಲು ಕಟ್ಟಿಕೊಂಡಿರುವವರನ್ನು ಎಬ್ಬಿಸುವುದು ಅಧಿಕಾರಶಾಹಿ ಅಡಳಿತವನ್ನು ತೋರಿಸುತ್ತದೆ’ ಎಂದರು. ‌

ADVERTISEMENT

ಶೋಭಾ ನಾಯ್ಕ ಮಾತನಾಡಿ, ‘ಒಂದೂವರೆ ವರ್ಷದಿಂದ ಗೀತಾ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ದೊಡ್ಡ ಅತಿಕ್ರಮಣದಾರರಿಗೆ ಏನೂ ಮಾಡದ ಇಲಾಖೆ, ಬದುಕಿಗಾಗಿ ಅತಿಕ್ರಮಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಪ್ರತಿಯೊಬ್ಬರಿಗೂ ಒಂದೇ ನ್ಯಾಯ ಇರಬೇಕು. ಸಾವಿರಾರು ಸಂಖ್ಯೆಯಲ್ಲಿರುವ ಅತಿಕ್ರಮಣಕಾರರು ರೊಚ್ಚಿಗೆದ್ದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಷ್ಟ ಎದುರಾಗಬಹುದು’ ಎಂದು ಎಚ್ಚರಿಸಿದರು.

ಗೀತಾ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿದ ಫಾರೆಸ್ಟ್ ಮತ್ತು ಗಾರ್ಡ್‌ ಅನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸ್ಥಳಕ್ಕೆ ಬಂದ ಡಿಸಿಎಫ್ ಎಸ್.ಜಿ.ಹೆಗಡೆ ಅವರು ‘ದೌರ್ಜನ್ಯ ನಡೆಸಿದ ಸಿಬ್ಬಂದಿ ವಿಚಾರಣೆ ನಡೆಸಿ, ವರ್ಗಾವಣೆ ಮಾಡಲಾಗುವುದು. ಕಾನೂನು ಮೀರಿ ಯಾರ ಮೇಲೆಯೂ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ಕುಮಟಾದ ಮಂಜು ಮರಾಠಿ ಮಾತನಾಡಿದರು.

ನಿಮ್ ಮನೆ ಕಿತ್ತಾಕ್ಬೇಕಾಗ್ತದೆ...

‘ಹೆಣ್ಣು–ಮಣ್ಣು ಸರಿಸಮಾನ. ನಮ್ಗೂ ಬದುಕು ಹಕ್ಕದೆ. ಹೆಣ್ಣಿಂದನೇ ಕುಲ ದೊಡ್ಡಾಗುದು ನೆನ್ಪಿಟ್ಕಳಿ..ಫಾರೆಸ್ಟ್‌ ಖಾತೆಲಿದ್ದವ್ರ ಹೆಂಡ್ರ ಕರ್ಕಂಡ್ ಬಂದ್ ಹಿಂಗ್ ಮಾಡಿದ್ರೆ ಒಪ್ಕಂಬುರಾ ? ಆ ಹೆಣ್ಮಗ್ಳ (ಗೀತಾ) ಆಸ್ಪತ್ರೆಯಿಂಗ್ ಬಿಡುಗಡೆ ಮಾಡ್ಸಿ ಮನೆ ಕಟ್ಸಿಕೊಡಿ. ಇಲ್ದಿದ್ರೆ ನಿಮ್ಮನೆ ಕಿತ್ತಾಕ್ಬೇಕಾಗ್ತದೆ...’ ಎಂದು ಹೋರಾಟಗಾರ್ತಿ ಸುಕ್ರಿ ಗೌಡ ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.