ADVERTISEMENT

ಅಡಿಕೆ ಆಮದು ನಿರ್ಧಾರ ಹಿಂಪಡೆಯಲಿ: ದೊಡ್ಡೂರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 12:52 IST
Last Updated 30 ಸೆಪ್ಟೆಂಬರ್ 2022, 12:52 IST
ದೀಪಕ ದೊಡ್ಡೂರು
ದೀಪಕ ದೊಡ್ಡೂರು   

ಶಿರಸಿ: ‘ಕೇಂದ್ರ ಸರ್ಕಾರ ಭೂತಾನ್‍ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿರುವ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೀಪಕ ದೊಡ್ಡೂರು ಆಗ್ರಹಿಸಿದರು.

‘ಉತ್ತರ ಕನ್ನಡವೂ ಸೇರಿದಂತೆ ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ತಪ್ಪು ನಿರ್ಧಾರವನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ. ಇದು ಅಡಿಕೆ ದರ ಕುಸಿಯುವ ಆತಂಕವನ್ನು ರೈತ ವಲಯದಲ್ಲಿ ಸೃಷ್ಟಿಸಿದೆ’ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಹಿಂದಿನ ಸರ್ಕಾರದ ತಪ್ಪಿನಿಂದ ಗುತ್ತಿಗೆದಾರರಿಗೆ ಕೋಟ್ಯಂತರ ವೆಚ್ಚದ ಕಾಮಗಾರಿ ಬಿಲ್ ಬಾಕಿ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿರುವುದು ಹಾಸ್ಯಾಸ್ಪದ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ತಾವು ಮಾಡಿದ ತಪ್ಪನ್ನು ಇನ್ನೊಬ್ಬರ ಹೆಗಲಿಗೆ ಹೊರಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದರು.

ADVERTISEMENT

‘ಕಳೆದ ವರ್ಷ ಅತಿವೃಷ್ಟಿಯಿಂದ ಉಂಟಾದ ಹಾನಿ ಸರಿಪಡಿಸಲು ಕೈಗೊಂಡ ಅಭಿವೃದ್ಧಿ ಕಾಮಗಾರಿಗೆ ಜಿಲ್ಲೆಗೆ ₹ 98 ಕೋಟಿಯಷ್ಟು ಬಾಕಿ ಇದೆ. ಇದನ್ನು ಗುತ್ತಿಗೆದಾರರು ಕೇಳಿದರೆ ಸಚಿವರು ಹಿಂದಿನ ಸರ್ಕಾರವನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ. ಅನುದಾನ ಘೋಷಣೆ ಮತ್ತು ಯೋಜನೆ ಅನುಷ್ಠಾನದ ಕುರಿತು ಬಿಜೆಪಿಯವರು ಅಧ್ಯಯನ ನಡೆಸುವ ಅಗತ್ಯವಿದೆ’ ಎಂದು ಕುಟುಕಿದರು.

ಜಗದೀಶ ಗೌಡ, ಬಸವರಾಜ ದೊಡ್ಮನಿ, ಶ್ರೀಪಾದ ಹೆಗಡೆ ಕಡವೆ, ಪ್ರವೀಣ ಗೌಡರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.