ADVERTISEMENT

‘ಸಿಂಥೆಟಿಕ್ ಟ್ರ್ಯಾಕ್ ಇದ್ದಲ್ಲೇ ಕ್ರೀಡಾಕೂಟ ಆಯೋಜಿಸಿ’

ವಿ.ವಿ.ಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ರವೀಂದ್ರ ನಾಯ್ಕ ಮನವಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 14:27 IST
Last Updated 29 ಅಕ್ಟೋಬರ್ 2018, 14:27 IST
ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಮಣ್ಣಿನ ಟ್ರ್ಯಾಕ್‌ನಲ್ಲಿ ಓಡುತ್ತಿರುವುದು
ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಮಣ್ಣಿನ ಟ್ರ್ಯಾಕ್‌ನಲ್ಲಿ ಓಡುತ್ತಿರುವುದು   

ಕಾರವಾರ: ಜಿಲ್ಲೆಯಲ್ಲಿ ಕ್ರೀಡಾಂಗಣಗಳಿಗೆ ಸಿಂಥೆಟಿಕ್ ಟ್ರ್ಯಾಕ್ ಇಲ್ಲದೇ ಕ್ರೀಡಾಪಟುಗಳ ಅಭ್ಯಾಸಕ್ಕೆ, ತರಬೇತಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಮತ್ತೊಮ್ಮೆ ಕೇಳಿಬಂದಿದೆ. ಅಂತರ್ ವಿಶ್ವವಿದ್ಯಾಲಯದಂತಹ ಕ್ರೀಡಾಕೂಟಗಳನ್ನು ಸೂಕ್ತ ವ್ಯವಸ್ಥೆಯಿದ್ದಲ್ಲೇ ಆಯೋಜಿಸಬೇಕುಎಂಬ ಆಗ್ರಹವೂ ವ್ಯಕ್ತವಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ, ‘ಹೊನ್ನಾವರದಲ್ಲಿ ನಡೆಯುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟವನ್ನು ಮಣ್ಣಿನ ಟ್ರ್ಯಾಕ್‌ನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಕ್ರೀಡಾಪಟುಗಳ ತಮ್ಮ ಸಂಪೂರ್ಣ ಸಾಮರ್ಥ್ಯ ತೋರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅರ್ಹತೆ ಸಿಗುತ್ತಿಲ್ಲ. ಆದ್ದರಿಂದ ಸಿಂಥೆಟಿಕ್ ಟ್ರ್ಯಾಕ್‌ನಲ್ಲೇ ಕ್ರೀಡಾಕೂಟ ಆಯೋಜಿಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ:ಶಿರಸಿಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು ಹಣ ಮಂಜೂರು ಮಾಡುವಂತೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಗಾಯತ್ರಿ ತಿಳಿಸಿದ್ದಾರೆ.

ADVERTISEMENT

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘₹ 3 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವ ಸಲ್ಲಿಸಲಾಗುವುದು. ಅದರಲ್ಲಿ ಒಳ ಮತ್ತು ಹೊರ ಚರಂಡಿ ವ್ಯವಸ್ಥೆಗೆ ₹ 1 ಕೋಟಿ ವೆಚ್ಚವಾಗಬಹುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಮೂಲಕ ಇಲಾಖೆಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

‘ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು ಅಗತ್ಯವಿರುವ 400 ಮೀಟರ್ ಉದ್ದದ ಟ್ರ್ಯಾಕ್ ನಮ್ಮ ಜಿಲ್ಲೆಯಲ್ಲಿ ಶಿರಸಿಯಲ್ಲಿ ಮಾತ್ರವಿದೆ. ಅಲ್ಲದೇ ರಾಜ್ಯಮಟ್ಟದ, ಜಿಲ್ಲಾಮಟ್ಟದ ವಿವಿಧ ಕ್ರೀಡಾಚಟುವಟಿಕೆಗಳು ಅಲ್ಲಿ ಹೆಚ್ಚು ಆಯೋಜನೆಗೊಳ್ಳುವ ಕಾರಣದಿಂದ ಆಯ್ಕೆ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.