ADVERTISEMENT

ನಿರೀಕ್ಷಿತ ಗುರಿ ತಲುಪದ ಸಾರಿಗೆ ಇಲಾಖೆ

ವಾಹನ ಖರೀದಿ ಇಳಿಮುಖ, ನೋಂದಣಿ ಪ್ರಮಾಣದಲ್ಲೂ ಕುಸಿತ

ಗಣಪತಿ ಹೆಗಡೆ
Published 24 ಅಕ್ಟೋಬರ್ 2020, 2:44 IST
Last Updated 24 ಅಕ್ಟೋಬರ್ 2020, 2:44 IST
ಶಿರಸಿಯ ಆರ್ ಟಿಓ ಕಚೇರಿ
ಶಿರಸಿಯ ಆರ್ ಟಿಓ ಕಚೇರಿ   

ಶಿರಸಿ: ಕೊರೊನಾ ಪ್ರಭಾವದಿಂದ ವಾಹನ ಮಾರಾಟ ಕ್ಷೇತ್ರಕ್ಕೂ ಹೊಡೆತ ಬಿದ್ದಿದ್ದು, ಪರಿಣಾಮವಾಗಿ ಹೊಸ ವಾಹನಗಳ ನೊಂದಣಿಯಲ್ಲಿ ಇಳಿಕೆಯಾಗಿದೆ. ಇದರಿಂದ ನಿರೀಕ್ಷಿತ ಪ್ರಮಾಣದಷ್ಟು ಆದಾಯ ಸಂಗ್ರಹಣೆ ಸಾರಿಗೆ ಇಲಾಖೆಗೆ ಸಾಧ್ಯವಾಗಿಲ್ಲ.

2020–21ನೇ ಸಾಲಿನ ಆರ್ಥಿಕ ವರ್ಷಕ್ಕೆ ಶಿರಸಿಯ ಪ್ರಾದೇಶಿಕ ಸಾರಿಗೆ ಕಚೇರಿಗೆ ₹29.16 ಕೋಟಿ ಆದಾಯ ಸಂಗ್ರಹಣೆ ಗುರಿ ನೀಡಲಾಗಿದೆ. ಏಪ್ರಿಲ್‍ನಿಂದ ಸೆಪ್ಟೆಂಬರ್ ವರೆಗೆ ₹12.15 ಕೋಟಿ ಆದಾಯ ಸಂಗ್ರಹಿಸಬೇಕಿತ್ತು. ಆದರೆ ₹7.13 ಕೋಟಿ ಸಂಗ್ರಹವಾಗಿದ್ದು, ಶೇ.58.7ರಷ್ಟು ಮಾತ್ರ ಸಾಧನೆಯಾಗಿದೆ.

2019–20ನೇ ಸಾಲಿನಲ್ಲಿ ನೀಡಲಾಗಿದ್ದ ₹29.13 ಕೋಟಿ ಗುರಿಯಲ್ಲಿ ₹26.98 ಕೋಟಿ ಸಂಗ್ರಹಿಸಲಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಆರ್ ಟಿಓ ಕಚೇರಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ADVERTISEMENT

ಏಪ್ರಿಲ್ ಆರಂಭದಲ್ಲಿ ಲಾಕ್‍ಡೌನ್ ಜಾರಿಯಿದ್ದ ಕಾರಣ ವಾಹನಗಳ ನೊಂದಣಿ ಪ್ರಮಾಣ ಕಡಿಮೆ ಇತ್ತು. ಚಾಲನಾ ಪರವಾನಗಿ ನವೀಕರಣ, ಹೊಸ ಪರವಾನಗಿ ಪ್ರಕ್ರಿಯೆಯೂ ಚುರುಕಾಗಿರಲಿಲ್ಲದ ಕಾರಣ ಆರಂಭದ ಕೆಲ ದಿನ ಇಲಾಖೆಗೆ ಬರಬೇಕಿದ್ದ ಆದಾಯ ಗಣನೀಯವಾಗಿ ಇಳಿದಿತ್ತು.

‘ಆರ್ಥಿಕ ವರ್ಷದ ಆರಂಭದ ಮೊದಲೆರಡು ತಿಂಗಳು ವಾಹನ ಖರೀದಿ, ನೋಂದಣಿ ಚಟುವಟಿಕೆಗಳು ಅಷ್ಟಾಗಿ ಇರಲಿಲ್ಲ.ಹೀಗಾಗಿ ರಾಜಸ್ವ ಸಂಗ್ರಹಣೆಯಲ್ಲಿ ಹಿಂದೆ ಬಿದ್ದೆವು. ನಂತರ ಆದಾಯ ಸಂಗ್ರಹಣೆ ಚೇತರಿಕೆ ಕಂಡಿದೆ’ ಎಂದು ಆರ್ ಟಿಒ ಚಂದ್ರಕಾಂತ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಆಗಸ್ಟ್ ಗಿಂತ ಈ ಬಾರಿಯೇ ಹೆಚ್ಚು ವಾಹನಗಳು ನೋಂದಣಿಯಾದವು. ಇದು ಚೇತರಿಕೆಯ ಸೂಚನೆ ನೀಡಿದೆ. ಇಲಾಖೆಗೆ ಇನ್ನಷ್ಟು ಆದಾಯ ತರಲು ಪ್ರಯತ್ನ ಮಾಡುತ್ತಿದ್ದೇವೆ. ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಹೇಳಿದರು.

‘ಕೊರೊನಾದಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಹೊಸ ವಾಹನಗಳ ಖರೀದಿಗೆ ಜನರು ಉತ್ಸಾಹ ತೋರಿಸುತ್ತಿಲ್ಲ. ಹಬ್ಬದ ಸಂದರ್ಭದಲ್ಲಾದರೂ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಸುಳ್ಳಾಗಿದೆ’ ಎಂದು ವಾಹನ ಮಾರಾಟ ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದರು.

***

ಸರ್ಕಾರ ನಿಗದಿಪಡಿಸಿದ ಆದಾಯ ಸಂಗ್ರಹಣೆ ಗುರಿ ತಲುಪಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಮಾರ್ಚ್ ಅಂತ್ಯಕ್ಕೆ ಪ್ರತಿಶತ ಸಾಧಿಸುವ ವಿಶ್ವಾಸವಿದೆ.
-ಚಂದ್ರಕಾಂತ ನಾಯ್ಕ, ಶಿರಸಿ ಆರ್‌ಟಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.