ಕಾರವಾರ: ‘ಹಿಂದುಳಿದ ವರ್ಗಗಳ ಕಲ್ಯಾಣದ ಕುರಿತು ಮಾತಿಗೆ ಸೀಮಿತವಾಗದೆ, ಅವರ ಏಳ್ಗೆಗೆ ಮಾದರಿ ಯೋಜನೆಗಳನ್ನು ತಂದ ಡಿ.ದೇವರಾಜ ಅರಸು ಶೋಷಿತ ವರ್ಗಗಳ ನೈಜ ಧ್ವನಿಯಾಗಿದ್ದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ದೈವಜ್ಞ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ನ್ಯಾಯ ಪರಿಪಾಲನೆಗೆ ಒತ್ತು ನೀಡಿದ್ದ ಅರಸು ಊಳುವವನೆ ಭೂಮಿಯ ಒಡೆಯ ಜಾರಿಗೆ ತಂದವರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಏಳ್ಗೆ ಸಾಧಿಸಲು ವಿದ್ಯಾರ್ಥಿ ವಸತಿ ನಿಲಯ ವ್ಯವಸ್ಥೆಯನ್ನೂ ಕಲ್ಪಿಸಿದ್ದರು’ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ‘ಡಿ.ದೇವರಾಜ ಅರಸು ಅವರ ಸಾಧನೆ ಯುವ ಪೀಳಿಗೆಗೆ ಆದರ್ಶವಾಗಬೇಕು. ಸಮಾಜಮುಖಿ ಚಿಂತನೆ ಗುಣ ಬೆಳೆಯಬೇಕು’ ಎಂದರು.
ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹೇಶ್ ನಾಯ್ಕ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಮೇಶ್ ವೈ.ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಕ್ಕ ಮಾದರ, ಗರಸಭೆ ಸದಸ್ಯ ಹನುಮಂತ ತಳವಾರ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಾಮದಾಸ್ ನಾಯ್ಕ, ವಾರ್ಡನ್ ನಿಶ್ಚಲ್ ಕಾಂಬ್ಲೆ ಇದ್ದರು. ಗಣೇಶ್ ಬಿಷ್ಟಣ್ಣನವರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.