ಹಳಿಯಾಳ: ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಸರ್ಕಾರದಿಂದ ಸುಮಾರು ₹ 30 ಕೋಟಿಯಷ್ಟು ಮಂಜೂರು ಆಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಭಾನುವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ತಾಲ್ಲೂಕಿನ ಜನಗಾ ಕ್ರಾಸ್ ಮೇಲ್ಭಾಗದಲ್ಲಿ ಬಾಂದಾರ ನಿರ್ಮಾಣ, ವಾಟ್ನಾಳ ಕ್ರಾಸ್ ಕೆಳಭಾಗದಲ್ಲಿ ಬಾಂದಾರ ನಿರ್ಮಾಣ, ಸಂಕನಕೊಪ್ಪ ಹತ್ತಿರವಿರುವ ಮಂಗಳಿ ಹಳ್ಳಕ್ಕೆ ಬಾಂದಾರ ನಿರ್ಮಾಣ, ಜೊಯಿಡಾ ತಾಲ್ಲೂಕಿನ ಮಾರಸಂಗಳ ಹತ್ತಿರ ಬಿಸಿಬಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದರು.
ತಾಲ್ಲೂಕಿನ ಹವಗಿ ಗ್ರಾಮದಿಂದ ವಿವೇಕ ಪ್ರಗತಿ ಶಾಲೆಯವರೆಗೆ ಹಳಿಯಾಳ ಕೆರೆ ತುಂಬಿಸುವ ಯೋಜನೆಯಡಿ ದುರಸ್ಥಿಗೊಳಗಾಗಿದ್ದ ರಸ್ತೆ ಪುನರ್ ನಿರ್ಮಾಣ ಹಾಗೂ ಪೈಪ್ ಹಾಸುವ ಕೆಲಸದಿಂದ ಹಾನಿಗೀಡಾಗಿದ್ದು ರಸ್ತೆ ಅಭಿವೃದ್ದಿಗೆ ₹ 2.10 ಕೋಟಿ ಮಂಜೂರಾಗಿದೆ ಎಂದರು.
ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಶುಭಂ ಯಶಪ್ಪಾ ಪಾಟೀಲ, ಮಾರುತಿ ಶಿವಾಜಿ ಭಾತಕಾಂಡೆ, ಅಪೂರ್ವ ನಾಗರಾಜ ಬೇವಿನಮರದ, ಸಂಭಾಜಿ ನಾಗೇಶ ದೇಸಾಯಿ, ರಮೇಶ ಭೀಮರಾಯ ಮಲ್ವಿ ಅವರಿಗೆ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇತ್ತೀಚಿಗೆ ಕಿಲ್ಲಾ ತಿಮ್ಮಾಪುರ ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಬಾಲಕ ನವಾಜ್ ಕ್ವಾಜಾಮೋಹಿದ್ದಿನ್ ಬೇಪಾರಿ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.
ಧರ್ಮಸ್ಥಳ ಕ್ಷೇತ್ರದ ವಿಚಾರವಾಗಿ ಸರ್ಕಾರ ನ್ಯಾಯಬದ್ಧವಾಗಿ, ಪಾರದರ್ಶಕತೆಯಿಂದ ತನ್ನ ಕರ್ತವ್ಯ ಕೈಗೊಂಡಿದೆ ಯಾರು ಧರ್ಮಸ್ಥಳದ ಕುರಿತು ಹೇಳಿಕೆ ನೀಡಿದ್ದರೋ ಆ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯ ಹೊರತಂದಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಧರ್ಮಸ್ಥಳದ ವಿಷಯವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಧರ್ಮದ ಸೇವೆಯನ್ನು ವೀರೇಂದ್ರ ಹೆಗ್ಗಡೆಯವರು ಈ ಹಿಂದಿನಿಂದಲೂ ಮಾಡುತ್ತಾ ಅನೇಕ ಜನೋಪಯೋಗಿ ಕಾರ್ಯವನ್ನು ಮಾಡಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.