ADVERTISEMENT

ಕಾರವಾರ: ಧರ್ಮಸ್ಥಳಕ್ಕೆ ಕಳಂಕ ತರಲು ಕಾಂಗ್ರೆಸ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:05 IST
Last Updated 30 ಆಗಸ್ಟ್ 2025, 7:05 IST
ರೂಪಾಲಿ ನಾಯ್ಕ
ರೂಪಾಲಿ ನಾಯ್ಕ   

ಕಾರವಾರ: ‘ಹಿಂದೂ ಧರ್ಮೀಯರ ಪವಿತ್ರ ಸ್ಥಳವಾಗಿರುವ ಧರ್ಮಸ್ಥಳಕ್ಕೆ ಕಳಂಕ ತರಲು ಕಾಂಗ್ರೆಸ್ ಸರ್ಕಾರದ ಬೆಂಬಲ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆರೋಪಿಸಿದರು.

‘ಅಪರಿಚಿತರು ತಲೆಬುರುಡೆ ಹಿಡಿದು ತಂದ ತಕ್ಷಣವೇ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ ಸರ್ಕಾರ ಎಡಪಂಥೀಯರ ಆಣತಿಯಂತೆ ಕೆಲಸ ಮಾಡಿದೆ. ಹಿಂದೂ ಯುವಕರ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿದಾಗ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲು ಆಸಕ್ತಿ ತೋರಿಸಿರಲಿಲ್ಲ. ಧರ್ಮಸ್ಥಳ ಪ್ರಕರಣ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ, ‘ಶ್ರದ್ಧಾಕೇಂದ್ರ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ತೇಜೋವಧೆಗೆ ದೊಡ್ಡ ಸಂಚು ನಡೆಸಲಾಗಿದೆ. ಧರ್ಮಸ್ಥಳ ಹೆಸರಿಗೆ ಕಳಂಕ ತರಲು ನಡೆದ ಪ್ರಯತ್ನದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಒತ್ತಾಯಿಸಿ ಸೆ.1 ರಂದು ಧರ್ಮಸ್ಥಳ ರಕ್ಷಣೆಗೆ ಧರ್ಮಯುದ್ಧ ಹೆಸರಿನಲ್ಲಿ ಧರ್ಮಸ್ಥಳ ಚಲೋ ಹೋರಾಟ ನಡೆಯಲಿದೆ. ಜಿಲ್ಲೆಯ 14 ಮಂಡಲಗಳಿಂದ ಕನಿಷ್ಠ 5 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ’ ಎಂದರು.

ADVERTISEMENT

‘ಕೋಮುವಾದ ನಿಯಂತ್ರಣ ಪಡೆ ರಚಿಸಿ ಏನು ಪ್ರಯೋಜನ ಆಗಿಲ್ಲ. ಕೇವಲ ಅಲ್ಪಸಂಖ್ಯಾತರ  ರಕ್ಷಣೆಗೆ ಪಡೆ ರಚಿಸಲಾಯಿತೇ ಹೊರತು ಹಿಂದುತ್ವದ ವಿರುದ್ಧ ಟೀಕಿಸಿದವರು, ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಯಾವುದೇ ಕ್ರಮ ಆಗಿಲ್ಲ’ ಎಂದರು.

ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ, ಪಕ್ಷದ ಪದಾಧಿಕಾರಿಗಳಾದ ಪ್ರಶಾಂತ ನಾಯ್ಕ, ಜಗದೀಶ ನಾಯಕ ಮೊಗಟಾ, ಸುನೀಲ ಸೋನಿ, ಸಂಜಯ ಸಾಳುಂಕೆ, ಮನೋಜ ಭಟ್, ಸುಭಾಷ ಗುನಗಿ, ಕಿಶನ್ ಕಾಂಬ್ಳೆ, ಸಂಜಯ ನಾಯ್ಕ ಇದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ
ರೂಪಾಲಿ ನಾಯ್ಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.