ADVERTISEMENT

ಕಾಳಿ ನೀರಿನ ನೇರ ಬಳಕೆ ಅಪಾಯಕಾರಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಧ್ಯಯನ

ದಾಂಡೇಲಿ ಭಾಗದಲ್ಲಿ ಹೆಚ್ಚು ಮಲಿನ?

​ಪ್ರಜಾವಾಣಿ ವಾರ್ತೆ
Published 14 ಮೇ 2019, 13:12 IST
Last Updated 14 ಮೇ 2019, 13:12 IST
ಕಾಳಿ ನದಿಯಲ್ಲಿ ನೀರಿನ ಮಾದರಿ ಸಂಗ್ರಹಿಸುತ್ತಿರುವ ವಿದ್ಯಾರ್ಥಿ
ಕಾಳಿ ನದಿಯಲ್ಲಿ ನೀರಿನ ಮಾದರಿ ಸಂಗ್ರಹಿಸುತ್ತಿರುವ ವಿದ್ಯಾರ್ಥಿ   

ಕಾರವಾರ: ಜೊಯಿಡಾ ತಾಲ್ಲೂಕಿನ ಡಿಗ್ಗಿಯಿಂದ ಹುಟ್ಟಿ ಕಾರವಾರದವರೆಗೆ ಹರಿಯುವ ಕಾಳಿ ನದಿಯು, ಈ ಭಾಗದ ಜನರ ಜೀವನಾಡಿ. ನದಿಯ ನೀರಿನ ಬಗ್ಗೆ ಅಧ್ಯಯನ ನಡೆಸಿದ ಕೆಲವು ಎಂಜಿನಿಯರಿಂಗ್ ವಿದ್ಯಾರ್ಥಿಗಳು, ನೀರು ಮಲಿನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶುದ್ಧೀಕರಿಸದೆ ನೇರವಾಗಿ ಬಳಸುವುದು ಅಪಾಯಕಾರಿ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಲ್ಲೂಕಿನ ಮಾಜಾಳಿಯ ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ವಿಘ್ನೇಶ್ವರ್ ಗಾಂವಕರ್, ಕುಮಾರ್ ಚೌಹಾಣ್, ವಿಶಾಲ್ ಕಾಣಕೋಣಕರ್ ಅವರು ಪ್ರೊ.ವೈಭವ್ ಶಿರೋಡ್ಕರ್ ಮಾರ್ಗದರ್ಶನದಲ್ಲಿ ಈ ವರದಿ ಸಿದ್ಧಪಡಿಸಿದ್ದಾರೆ. ‘ಕಾಳಿ ನದಿಯಲ್ಲಿ ಅನೇಕ ಮಲಿನಕಾರಿ ಅಂಶಗಳು ಸೇರ್ಪಡೆಯಾಗುತ್ತಿದ್ದು,ಇವುಜನ– ಜಾನುವಾರು, ಜಲಚರ ಜೀವಿ, ಸಸ್ಯಗಳಿಗೂ ಅಪಾಯಕಾರಿ’ ಎಂದು ವಿವರಿಸಿದ್ದಾರೆ.

ವರದಿಯಲ್ಲಿ ಏನಿದೆ?

ADVERTISEMENT

ನೀರು ಬಳಕೆಗೆ ಯೋಗ್ಯವೋ, ಇಲ್ಲವೋ ಎನ್ನುವುದನ್ನುಅದರ ಗುಣಮಟ್ಟ ಸೂಚ್ಯಂಕದ ಪ್ರಕಾರ ನಿರ್ಧರಿಸಲಾಗುತ್ತದೆ. ಅದರಂತೆ, ಸೂಚ್ಯಂಕದ 25ರ ಮಟ್ಟದ ನೀರು ಉತ್ತಮವಾಗಿದೆ.ಅದನ್ನು ಕುಡಿಯಲು, ನೀರಾವರಿಗೆ ಹಾಗೂ ಕಾರ್ಖಾನೆಗಳಿಗೆ ಬಳಸಬಹುದು.

25ರಿಂದ 50ರ ಮಟ್ಟ ಇದ್ದರೆ ಗೃಹಬಳಕೆಗೆ, 51ರಿಂದ 75ರ ಮಟ್ಟ ನೀರಾವರಿ ಹಾಗೂ ಕಾರ್ಖಾನೆಗಳಿಗೆ ಯೋಗ್ಯವಾಗಿದೆ. 76ರಿಂದ 100ರ ಮಟ್ಟ ನೀರಾವರಿಗೆ, 101ರಿಂದ 150ರ ಮಟ್ಟ ನಿರ್ಬಂಧಿತ ನೀರಾವರಿ ಬಳಕೆಗೆ, 150ಕ್ಕೂ ಮೇಲಿದ್ದರೆ ಅದನ್ನು ಬಳಸುವ ಮುನ್ನ ಪರೀಕ್ಷಿಸಬೇಕು ಎಂದಿದೆ.

ವಿದ್ಯಾರ್ಥಿಗಳು ಇದೇ ಮಾದರಿಯಲ್ಲಿ ಕಾಳಿ ನದಿಯ ನೀರನ್ನು ಪರೀಕ್ಷೆಗೆ ಒಳಪಡಿಸಿದರು. ದಾಂಡೇಲಿಯ ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್‌ನ ವಿಲೇವಾರಿ ಕೇಂದ್ರದ ಬಳಿ ಈ ಮಟ್ಟ 104ರಷ್ಟಿದೆ. ಕೈಗಾ ಅಣು ವಿದ್ಯುತ್ ಸ್ಥಾವರದ ಕೆಳಭಾಗದಲ್ಲಿ ಸಂಗ್ರಹಿಸಿದ ನೀರಿನ ಮಾದರಿಸೂಚ್ಯಂಕದ ಪ್ರಕಾರ 29ರಷ್ಟಿದೆ. ಇದುಗೃಹಬಳಕೆಗೆಯೋಗ್ಯಎನ್ನುತ್ತಾರೆವಿದ್ಯಾರ್ಥಿಗಳು.

ಮುಂಗಾರು ಪೂರ್ವ ಅಧ್ಯಯನ

184 ಕಿ.ಮೀ. ವ್ಯಾಪ್ತಿ ಹೊಂದಿರುವ ಕಾಳಿಯಲ್ಲಿ ವಿದ್ಯಾರ್ಥಿಗಳು ಮಳೆಗಾಲಕ್ಕೂ ಪೂರ್ವ ಸುಮಾರು ಒಂದು ತಿಂಗಳು ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಿದ್ದಾರೆ.

ಎಲೆಕ್ಟ್ರೋಮೆಟ್ರಿಕ್ ವಿಧಾನದಿಂದ ನದಿ ನೀರಿನ ‘ಪಿಎಚ್‌’ ಮಟ್ಟವನ್ನು ಅಳತೆ ಮಾಡಿದ್ದಾರೆ. ಘರ್ಷಣೆಯ ಪ್ರಮಾಣವನ್ನು ನೆಫ್ಲೋಮೆಟ್ರಿಯಿಂದ, ಕ್ಷಾರೀಯತೆ, ಆಮ್ಲೀಯತೆ, ಗಡಸುತನ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕ್ಲೋರೈಡ್‌ಗಳನ್ನುಟೈಟ್ರಿಮೆಟ್ರಿಕ್ ವಿಧಾನದಿಂದಪರೀಕ್ಷೆಗೆ ಒಳಪಡಿಸಿದ್ದಾರೆ.

‘ಒಟ್ಟು ಕರಗಿದ ಘನವಸ್ತುಗಳು, ಸಲ್ಫೇಟ್‌, ಕರಗಿದ ಆಮ್ಲಜನಕ (ಡಿಒ), ಜೈವಿಕ ರಾಸಾಯನಿಕ ಆಮ್ಲಜನಕದ ಬೇಡಿಕೆ (ಬಿಒಡಿ), ಕಬ್ಬಿಣದ ಅಂಶ, ರಾಸಾಯನಿಕ ಆಮ್ಲಜನಕದ ಬೇಡಿಕೆ (ಸಿಇಡಿ) ಹಾಗೂ ನೈಟ್ರೇಟ್‌ ಅನ್ನು ಅಮೆರಿಕನ್ ಪಬ್ಲಿಕ್ ಹೆಲ್ತ್ ಅಸೋಸಿಯೇಶನ್ (ಎಪಿಎಚ್‌ಎ) ನಿರ್ಧರಿತ ವಿಧಾನದಿಂದ ಪರೀಕ್ಷೆಗೆ ಒಳಪಡಿಸಿ ವರದಿ ತಯಾರಿಸಲಾಗಿದೆ. ಈ ವರದಿಗೆ ಅಂತಿಮ ಸ್ಪರ್ಶ ಕೊಡುವುದು ಬಾಕಿಯಿದೆ. ಬಳಿಕ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಎಲ್ಲೆಲ್ಲಿ ಪರೀಕ್ಷೆ?

ಕಾಳಿ ನದಿ ಹರಿಯುವ ಸೂಪಾ ಡ್ಯಾಂ ಕೆಳಭಾಗವಾದ ಗಣೇಶಗುಡಿ, ದಾಂಡೇಲಿಯ ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್‌ನ ವಿಲೇವಾರಿ ಕೇಂದ್ರದ ಬಳಿ, ಕೊಡಸಳ್ಳಿ ಡ್ಯಾಂ ಮೇಲ್ಭಾಗದ ಶಿವಪುರ ಸೇತುವೆಯ ಬಳಿ, ಕೈಗಾ ಅಣು ವಿದ್ಯುತ್ ಸ್ಥಾವರದ ಕೆಳಭಾಗ, ಕದ್ರಾ ಬಸ್ ನಿಲ್ದಾಣದ ಬಳಿ, ಉಳಗಾ– ಕೆರವಡಿ ತೀರದಲ್ಲಿ ವಿದ್ಯಾರ್ಥಿಗಳು ನೀರನ್ನು ಪರೀಕ್ಷೆಗೆ ಸಂಗ್ರಹಿಸಿದ್ದಾರೆ. ಇಲ್ಲಿಂದ ಸಂಗ್ರಹಿಸಿದ ನೀರನ್ನು ಸುಮಾರು ಆರು ವಿಧಾನಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.