ADVERTISEMENT

ಶಾಲಾ ಶುಲ್ಕದ ಮಾಹಿತಿ ಪ್ರಕಟಣೆ ಕಡ್ಡಾಯ: ಸಚಿವ ಸುರೇಶ್‌ ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 14:10 IST
Last Updated 28 ಡಿಸೆಂಬರ್ 2019, 14:10 IST
ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್‌ಗೆ ಶನಿವಾರ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್‌ಗೆ ಶನಿವಾರ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು   

ಕಾರವಾರ:‘ಖಾಸಗಿ ಶಾಲೆಗಳ ವೆಬ್‌ಸೈಟ್ ಹಾಗೂ ನೋಟಿಸ್‌ ಬೋರ್ಡ್‌ನಲ್ಲಿ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಇದನ್ನು ಪಾಲನೆ ಮಾಡದ ಶಾಲೆಗಳ ಮಾಹಿತಿಯನ್ನು ಕಲೆಹಾಕಲಾಗುತ್ತಿದ್ದು, ಇಲಾಖೆಯ ಆಯುಕ್ತರು ಕ್ರಮ ಕೈಗೊಳ್ಳಲಿ‌ದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಹೊನ್ನಾವರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶುಲ್ಕ ಸಂಗ್ರಹದ ಬಗ್ಗೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು.

‘ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಬಗ್ಗೆ ಯಾವುದೇ ಆತಂಕ ಅನಗತ್ಯ. ಒಂಬತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯದಿರುವ ಕಾರಣ ಅವರಿಗೆ ಆ ವ್ಯವಸ್ಥೆಯ ಅನುಭವ ಇರುವುದಿಲ್ಲ. ಹಾಗಾಗಿ ಅವರಿಗೆ ಗಣಿತ, ಕನ್ನಡ, ಇಂಗ್ಲಿಷ್ ಬರಿಯುವುದು ಕಷ್ಟ ಎಂಬ ಭಾವನೆಯಿದೆ. ಅವರಿಗೆ ಒಂದು ಸಲ ಅವಲೋಕನದ ಅವಶ್ಯಕತೆಯಿದೆ. ಈ ಬಾರಿ ಯಾವುದೇ ಮಕ್ಕಳನ್ನೂ ಅನುತ್ತೀರ್ಣಗೊಳಿಸುವುದಿಲ್ಲ. ಆದರೆ, ಯಾವ ರೀತಿ ಪರೀಕ್ಷೆ ಆಯೋಜಿಸಬೇಕು ಎಂಬ ಬಗ್ಗೆ ಈ ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಗಡಿ ಪ್ರದೇಶಗಳಲ್ಲಿ ನೆರೆಯ ರಾಜ್ಯಗಳ ಖಾಸಗಿ ಶಾಲೆಗಳು ವಾಹನಗಳನ್ನು ಕಳುಹಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಬಗ್ಗೆ ಮಾತನಾಡಿದ ಅವರು, ‘ಈ ಬಗ್ಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಇಂತಹ ಸಮಸ್ಯೆಗಳಿರುವ ಗಡಿ ಪ್ರದೇಶಗಳಲ್ಲಿ ವಿಶೇಷ ಗಮನ ಕೊಡಲಾಗುವುದು. ಗಡಿ ಭಾಗದ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಕೀಳರಿಮೆ ಬಾರದಂತೆ ಮಾಡುವುದು ಮುಖ್ಯ. ಈ ಬಗ್ಗೆ ನಾನು ಗಮನ ಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.