ಭಟ್ಕಳ: ದಶಕದ ಹೋರಾಟದ ಫಲವಾಗಿ ತಾಲ್ಲೂಕಿನ ಮೂಡಭಟ್ಕಳ ಹಾಗು ಕಾಯ್ಕಿಣಿ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ಅಂಡರ್‌ಪಾಸ್ ನಿರ್ಮಾಣ ಮಾಡಲು ಮಂಜೂರಾತಿ ಸಿಕ್ಕಿದೆ. ಈ ಸಂತಸ ಒಂಡೆಯಾದರೆ, ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರ ಬೇಡಿಕೆಗೆ ಸ್ಪಂದನೆ ಸಿಗದಿರುವುದು ಬೇಸರಕ್ಕೆ ಕಾರಣವಾಗಿದೆ.
ಪಟ್ಟಣದ ಶಂಸುದ್ದೀನ್ ವೃತ್ತದ ಬಳಿ ಮೇಲ್ಸೇತುವೆ ನಿರ್ಮಾಣ, ರಂಗಿನಕಟ್ಟೆ ಬಳಿ ಮಳೆಗಾಲದಲ್ಲಿ ಜಲಾವೃತ ಸಮಸ್ಯೆ ತಪ್ಪಿಸಲು ವ್ಯವಸ್ಥಿತ ಚರಂಡಿ ನಿರ್ಮಾಣ, ಶಿರಾಲಿ ಬಳಿ ರಸ್ತೆ ವಿಸ್ತರಣೆ ಸೇರಿದಂತೆ ಸರ್ವೀಸ್ ರಸ್ತೆ ನಿರ್ಮಾಣದಂತಹ ಹಲವು ಬೇಡಿಕೆಗಳಿವೆ. ಅವುಗಳನ್ನು ಈಡೇರಿಸುವಂತೆ ಹಲವು ಬಾರಿ ಪ್ರತಿಭಟನೆಗಳೂ ನಡೆದಿವೆ.
ಪಟ್ಟಣದ ಅಂಡರ್‌ಪಾಸ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹೆದ್ದಾರಿ ಹೋರಾಟ ಸಮಿತಿ ಸದಸ್ಯರು ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದರು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪದೇ ಈಗಿರುವ ರಸ್ತೆಯನ್ನೇ ವಿಸ್ತರಣೆ ಮಾಡುವ ಕಾಮಗಾರಿ ಆರಂಭಿಸಿದೆ.
‘ತಾಲ್ಲೂಕಿನಲ್ಲಿ ಐ.ಆರ್.ಬಿ ಇನ್‍ಫ್ರಾಸ್ಟ್ರಕ್ಚರ್ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯ ಗೊರ್ಟೆ ಗಡಿಭಾಗದಿಂದ ಬೈಲೂರು ತನಕ ಪ್ರತಿದಿನ ಅಪಘಾತ ಸಂಭವಿಸುತ್ತಿದೆ. ಭಟ್ಕಳದಲ್ಲಿ ಆಗಬೇಕಾದ ತುರ್ತು ಹೆದ್ದಾರಿ ಕಾಮಗಾರಿಗಳಿಗೆ ಹಲವು ವರ್ಷದಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ’ ಎಂದು ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ ಆರೋಪಿಸಿದರು.
‘ಶಿರಾಲಿಯ ಮಾರುಕಟ್ಟೆ ಪ್ರದೇಶ ಹೆದ್ದಾರಿ ಬದಿಯಲ್ಲೇ ಇರುವ ಕಾರಣ ಇಲ್ಲಿನ ಹೆದ್ದಾರಿ ವಿಸ್ತರಣೆಯನ್ನು 40 ಮೀಟರ್ ಬದಲಾಗಿ 35 ಮೀ.ಗೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ನಿತ್ಯ ಅಪಘಾತ ಸಂಭವಿಸುತ್ತಿದೆ. ಶಿರಾಲಿ ಪಟ್ಟಣದ ವ್ಯಾಪ್ತಿಯಲ್ಲಿ ಅಂಡರ್‌ಪಾಸ್ ನಿರ್ಮಿಸಬೇಕೆಂಬ ಆಗ್ರಹಕ್ಕೆ ಮನ್ನಣೆ ಸಿಕ್ಕಿಲ್ಲ’ ಎಂದು ದೂರಿದರು.
ಭಟ್ಕಳದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆದೇಶ ನೀಡಿದರೆ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದುಸುದೇಶ ಶೆಟ್ಟಿ ಎಂಜಿನಿಯರ್ ಐ.ಆರ್.ಬಿ ಇನ್‍ಫ್ರಾಸ್ಟ್ರಕ್ಚರ್ ಕಂಪನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.