ADVERTISEMENT

ಫಿತ್ರ್ ಕಮಿಟಿಯಿಂದ 1914 ಕುಟುಂಬಗಳಿಗೆ ಅಕ್ಕಿ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 14:25 IST
Last Updated 25 ಜೂನ್ 2018, 14:25 IST
ಭಟ್ಕಳದ ಜಾಮಿಯಾಬಾದ್‌ನ ಅಬುಲ್ ಹಸನ್ ಅಲಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಫಿತ್ರ್ ಕಮಿಟಿ ಸಭೆಯಲ್ಲಿ ಸಂಚಾಲಕ ಮೌಲಾನಾ ಮಹಮ್ಮದ್ ಇಲ್ಯಾಸ್ ನದ್ವಿ ಮಾತನಾಡಿದರು
ಭಟ್ಕಳದ ಜಾಮಿಯಾಬಾದ್‌ನ ಅಬುಲ್ ಹಸನ್ ಅಲಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಫಿತ್ರ್ ಕಮಿಟಿ ಸಭೆಯಲ್ಲಿ ಸಂಚಾಲಕ ಮೌಲಾನಾ ಮಹಮ್ಮದ್ ಇಲ್ಯಾಸ್ ನದ್ವಿ ಮಾತನಾಡಿದರು   

ಭಟ್ಕಳ: ಈದ್‌ ಉಲ್ ಫಿತ್ರ್ ಹಬ್ಬದಂದು ಫಿತ್ರ್‌ ಕಮಿಟಿಯಿಂದ ಭಟ್ಕಳ ತಾಲ್ಲೂಕು ಸೇರಿದಂತೆ ಕುಂದಾಪುರ ತಾಲ್ಲೂಕಿನ ಕೆಲ ಗ್ರಾಮದ 1,914 ಬಡ ಕುಟುಂಬಗಳಿಗೆ 957 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಫಿತ್ರ್‌ ಕಮಿಟಿಯ ಸಂಚಾಲಕ ಮೌಲಾನ ಮಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು.

ಜಾಮಿಯಾಬಾದ್‌ನ ಅಬುಲ್ ಹಸನ್ ಅಲಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಫಿತ್ರ್ ಕಮಿಟಿಯ ಅವಲೋಕನ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.

‘ಫಿತ್ರ್ ಅಂದರೆ ದಾನ. ಬಡವರು ಸಹ ಈದ್ ಹಬ್ಬದ ಖುಷಿಯಲ್ಲಿ ಪಾಲ್ಗೊಳ್ಳುವಂತಾಗಲು, ಕುಟುಂಬದ ಪ್ರತಿಯೊಬ್ಬ ಸದಸ್ಯನು ಕಡ್ಡಾಯವಾಗಿ ನೀಡಲೇಬೇಕಾದ ದಾನ (ಝಕಾತ್) ಆಗಿದೆ. ಇದನ್ನು ಸಾಮೂಹಿಕವಾಗಿ ಕ್ರೋಡೀಕರಣ ಮಾಡುವ ಕೆಲಸವನ್ನು ಭಟ್ಕಳದ ಫಿತ್ರ್ ಕಮಿಟಿ 24 ವರ್ಷಗಳಿಂದ ಮಾಡುತ್ತ ಬಂದಿದೆ’ ಎಂದರು.

ADVERTISEMENT

ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಮೌಲಾನ ಮಖ್ಬೂಲ್ ಅಹಮ್ಮದ್ ಕೋಬಟ್ಟೆ ಮಾತನಾಡಿ, ‘ಭೂಮಿಯಲ್ಲಿ ವಾಸಿಸುವ ಎಲ್ಲರಿಗೂ ಹಬ್ಬವನ್ನು ಸಂತೋಷ ಸಡಗರದಿಂದ ಆಚರಿಸುವಂತಾಗಲು ಇಸ್ಲಾಂ ಧರ್ಮ ಕಂಡುಕೊಂಡ ದಾರಿ ದಾನವಾಗಿದೆ. ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ಸಂತೋಷದಿಂದ ವಂಚಿತನಾಗಕೂಡದು ಎಂಬುದೇ ಆಶಯ’ ಎಂದರು.

ತಂಝೀಮ್ ಉಪಾಧ್ಯಕ್ಷ ಮೊಹಮ್ಮದ್ ಜಾಫರ್ ಮೊಹತೆಶಮ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಅಬ್ದುಲ್ ಮತೀನ್ ಮುನಿರಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಸಿದ್ದೀಕ್ ಮೀರಾ, ದುಬೈ ಜಮಾಅತ್‌ನ ಅಬ್ದುಸ್ಸಮಿ ಕೋಲಾ, ನೋಮಾನ್ ಮಾತನಾಡಿದರು.
ಹಿರಿಯರಾದ ಅಬ್ದುಲ್ ಹಮೀದ್ ಸಾಬ್ ಉಪಸ್ಥಿತರಿದ್ದರು. ಎಸ್. ಎಂ ಸೈಯ್ಯದ್ ಪರ್ವೇಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.