ADVERTISEMENT

ಕಾರವಾರ: ಎಂಟೂವರೆ ತಿಂಗಳಲ್ಲಿ ಆರು ಸಾವಿರ ನಾಯಿ ಕಡಿತ

ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ: ಆತಂಕದಲ್ಲಿ ಜನತೆ

ಗಣಪತಿ ಹೆಗಡೆ
Published 22 ಸೆಪ್ಟೆಂಬರ್ 2023, 5:00 IST
Last Updated 22 ಸೆಪ್ಟೆಂಬರ್ 2023, 5:00 IST
ಶಿರಸಿ ನಗರದ ಮುಖ್ಯ ರಸ್ತೆಯೊಂದರಲ್ಲಿದ್ದ ಬೀದಿನಾಯಿಗಳ ಗುಂಪು  (ಸಂಗ್ರಹ ಚಿತ್ರ)
ಶಿರಸಿ ನಗರದ ಮುಖ್ಯ ರಸ್ತೆಯೊಂದರಲ್ಲಿದ್ದ ಬೀದಿನಾಯಿಗಳ ಗುಂಪು  (ಸಂಗ್ರಹ ಚಿತ್ರ)   

ಕಾರವಾರ: ಜಿಲ್ಲೆಯ ಬಹುತೇಕ ನಗರ, ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಬೀದಿನಾಯಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕಳವಳ ಸೃಷ್ಟಿಸಿದೆ.

ಪುಟ್ಟ ಮಕ್ಕಳು, ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಅಲೆಮಾರಿಗಳು, ಚಿಂದಿ ಆಯವವರ ಮೇಲೆ ನಾಯಿ ದಾಳಿ ನಡೆಸುತ್ತಿರುವ ಘಟನೆಗಳು ವಾರಕ್ಕೊಂದರಂತೆ ಘಟಿಸುತ್ತಿವೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಜನವರಿ ತಿಂಗಳಿನಿಂದ ಸೆಪ್ಟೆಂಬರ್ 15ರ ಅವಧಿಯಲ್ಲಿ ಜಿಲ್ಲೆಯಲ್ಲಿ ನಾಯಿ ಕಡಿತದ ಒಟ್ಟು 6,045 ಪ್ರಕರಣಗಳು ವರದಿಯಾಗಿವೆ.

ನಾಲ್ಕೈದು ದಿನಗಳ ಹಿಂದಷ್ಟೆ ಇಲ್ಲಿನ ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಆರೇಳು ಮಂದಿ ಕಾರ್ಮಿಕರು ಬೀದಿ ನಾಯಿ ಕಡಿತದಿಂದ ಗಾಯಗೊಂಡಿದ್ದರು. ಬಂದರು ಪ್ರದೇಶದಲ್ಲಿ ರಾತ್ರಿ ವೇಳೆ ಓಡಾಟ ನಡೆಸಲು ಆತಂಕವಾಗುತ್ತದೆ ಎಂದು ಈ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ನಗರದ ಹಬ್ಬುವಾಡಾ ರಸ್ತೆ, ಕೋಡಿಬಾಗ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರ ಮೇಲೆ ಈಚೆಗಷ್ಟೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿತ್ತು. ತಪ್ಪಿಸಿಕೊಳ್ಳಲು ಯತ್ನಿಸಿದ ಸವಾರರಿಬ್ಬರು ಬಿದ್ದು ಗಾಯಗೊಂಡಿದ್ದರು. ಭಟ್ಕಳದಲ್ಲಿ ಕೆಲವು ತಿಂಗಳುಗಳ ಹಿಂದೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಾಯಿಗಳ ದಾಳಿ ನಡೆದಿತ್ತು. ಬೀದಿನಾಯಿಗಳ ಉಪಟಳದ ಪಟ್ಟಿ ಹೀಗೆ ಬೆಳೆಯುತ್ತಲೇ ಸಾಗುತ್ತದೆ.

‘ಕ್ರಿಮ್ಸ್ ಮಕ್ಕಳ ಚಿಕಿತ್ಸಾ ವಿಭಾಗದ ವಾರ್ಡುಗಳಲ್ಲಿಯೇ ಬೀದಿನಾಯಿಗಳ ಓಡಾಟ ನಡೆಸುತ್ತವೆ. ರಾತ್ರಿ ವೇಳೆ ತುರ್ತು ಸಂದರ್ಭದಲ್ಲಿ ವಾರ್ಡುಗಳಿಗೆ ತೆರಳಲೂ ಭಯವಾಗುತ್ತದೆ. ದಷ್ಟಪುಷ್ಟವಾಗಿ ಬೆಳೆದಿರುವ ನಾಯಿಗಳ ಓಡಾಟ ಆತಂಕ ಹುಟ್ಟಿಸುವುದಲ್ಲದೆ ಯಾವ ಕ್ಷಣದಲ್ಲಿ ಮಕ್ಕಳ ಮೇಲೆ ಎರಗುತ್ತವೆಯೋ ಎಂಬ ಭಯವಿದೆ’ ಎಂದು ಇಲ್ಲಿನ ಸೋನಾರವಾಡಾದ ನಿವಾಸಿ ದಿನೇಶ ರಾಯ್ಕರ್ ಹೇಳಿದರು.

‘ಕೋಳಿಮಾಂಸ, ಹೊಟೆಲ್ ತ್ಯಾಜ್ಯಗಳನ್ನು ಕೆಲವೆಡೆ ಈಗಲೂ ಕಸದ ತೊಟ್ಟಿಯಲ್ಲಿ ಎಸೆಯುವ ಅಥವಾ ಖಾಲಿ ಜಾಗದಲ್ಲಿ ಎಸೆಯಲಾಗುತ್ತಿದೆ. ಇವುಗಳು ಬೀದಿನಾಯಿಗಳ ಬೆಳವಣಿಗೆಗೆ ಅನುಕೂಲವಾಗಿವೆ. ನಗರ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮವಹಿಸುತ್ತಿಲ್ಲ. ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸುತ್ತಿದ್ದರೂ ಬೀದಿನಾಯಿಗಳ ಸಂಖ್ಯೆ ವೃದ್ಧಿಯಾಗುತ್ತಿರುವುದು ಶಂಕೆ ಮೂಡಿಸುತ್ತದೆ’ ಎನ್ನುತ್ತಾರೆ ಶ್ಯಾಮಲಾ ಗೌಡ.

ನಾಯಿ ಕಡಿತಕ್ಕೆ ಚಿಕಿತ್ಸೆ ಒದಗಿಸುವ ಔಷಧಗಳು ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಇದೆ. ರೇಬಿಸ್ ತಡೆ ಲಸಿಕೆಯ ಕೊರತೆಯೂ ಇಲ್ಲ.
ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ

70 ಸಾವಿರ ಬೀದಿ ನಾಯಿಗಳು

ಪಶು ಸಂಗೋಪನಾ ಇಲಾಖೆ ಈಚೆಗೆ ನಡೆಸಿರುವ ಜಾನುವಾರು ಗಣತಿಯಲ್ಲಿ ಜಿಲ್ಲೆಯಲ್ಲಿ ಸುಮಾರು 70 ಸಾವಿರದಷ್ಟು ಬೀದಿ ನಾಯಿಗಳಿರಬಹುದು ಎಂದು ಅಂದಾಜಿಸಿದೆ. ‘ಬೀದಿನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಕೆಲವು ತಿಂಗಳ ಹಿಂದೆ ಕಾರವಾರದಲ್ಲಿ ನಾಯಿ ಕಡಿತದಿಂದ ಮೃತಪಟ್ಟಿದ್ದ ಆಕಳಿನಲ್ಲಿ ರೇಬಿಸ್ ದೃಢಪಟ್ಟಿತ್ತು. ಈಚಿನ ವರ್ಷಗಳಲ್ಲಿ ರೇಬಿಸ್ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿತ್ತು. ಸಾಕು ನಾಯಿ ಅಥವಾ ಬೀದಿನಾಯಿಗೆ ನೀಡಲು ರೇಬಿಸ್ ಲಸಿಕೆಯ ದಾಸ್ತಾನಿದೆ. ಅಕ್ಟೋಬರ್‌ನಲ್ಲಿ ಜಿಲ್ಲೆಯಾದ್ಯಂತ ರೇಬಿಸ್ ನಿಯಂತ್ರಣ ಅಭಿಯಾನ ನಡೆಸಲಾಗುತ್ತದೆ. ಈ ವೇಳೆ ಬೀದಿನಾಯಿಗಳಿಗೆ ಲಸಿಕೆ ನೀಡಲಾಗುತ್ತದೆ’ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ರಾಕೇಶ್ ಬಂಗ್ಲೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.