ADVERTISEMENT

ಮಳೆ ನೀರಿನ ಚರಂಡಿಗೆ ಮಣ್ಣು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 13:45 IST
Last Updated 10 ಜೂನ್ 2019, 13:45 IST
ಕಾರವಾರದ ಉಡುಪಿ ಕೆಫೆ ಬಳಿ ಚರಂಡಿ ಪೈಪ್‌ಗೆ ಮಣ್ಣು ಹಾಕಿರುವುದು
ಕಾರವಾರದ ಉಡುಪಿ ಕೆಫೆ ಬಳಿ ಚರಂಡಿ ಪೈಪ್‌ಗೆ ಮಣ್ಣು ಹಾಕಿರುವುದು   

ಕಾರವಾರ:ನಗರದ ಕಾಳಿ ನದಿ ಸೇತುವೆ ಸಮೀಪವಿರುವ ಉಡುಪಿ ಕೆಫೆ ಸಮೀಪದಿಂದ ಸಾಗುವ ಮಳೆ ನೀರಿನ ಪೈಪ್‌ಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ಅವಾಂತರ ಮಾಡಲಾಗಿದ್ದು, ನೀರು ನಿಂತು ಸೊಳ್ಳೆಗಳಉತ್ಪತ್ತಿಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

ಚತುಷ್ಪಥ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಮೂರು ಪೈಪ್‌ಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಒಂದನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮತ್ತೆರಡನ್ನು ಅರ್ಧ ಭಾಗಕ್ಕೆ ಮಣ್ಣು ಸುರಿಯಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಸಾಗುತ್ತಿಲ್ಲ.

ಈ ವಿಚಾರವನ್ನು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕ್ಯಾ.ರಮೇಶ ರಾವ್ ಅವರ ಗಮನಕ್ಕೆ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು. ರಸ್ತೆಯ ಕಾಮಗಾರಿ ನಡೆಸುತ್ತಿರುವ ಐಡಿಯಲ್ ರೋಡ್ ಬಿಲ್ಡರ್ಸ್‌ನ ಅಧಿಕಾರಿಗಳೂ ಸ್ಥಳಕ್ಕೆ ಬಂದರು.

ADVERTISEMENT

ಕೂಡಲೇ ಮಣ್ಣನ್ನು ತೆರವು ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳು ಇದೇ ವೇಳೆ ಐಆರ್‌ಬಿ ಸಿಬ್ಬಂದಿಗೆ ಸೂಚಿಸಿದರು.

ಚರಂಡಿಯಲ್ಲಿ ನೀರಿನ ಪೈಪ್!:ಹೆದ್ದಾರಿಯ ಮತ್ತೊಂದು ಬದಿಗೆ ಸಾಗುವ ಚರಂಡಿ ಪೈಪ್‌ನ ಮೂಲಕೇ ಕುಡಿಯುವ ನೀರಿನ ಪೈಪ್‌ ಕೂಡ ಅಳವಡಿಸಲಾಗಿದೆ. ಈ ಬಗ್ಗೆಯೂ ನಾಗರಿಕರಿಂದ ಆಕ್ಷೇಪ ವ್ಯಕ್ತವಾಯಿತು. ಚರಂಡಿ ಕೊಳಚೆ ನೀರಿನೊಂದಿಗೆ ಕುಡಿಯುವ ನೀರಿನ ಪೈಪ್ ಅಳವಡಿಸಲು ಅವಕಾಶ ನೀಡಿದ್ದು ಹೇಗೆ ಎಂದು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.