ADVERTISEMENT

ಕಾರುಗಳ ಮುಖಾಮುಖಿ ಡಿಕ್ಕಿ: ಚಾಲಕರೊಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 11:28 IST
Last Updated 3 ಏಪ್ರಿಲ್ 2021, 11:28 IST
ಅಂಕೋಲಾ ತಾಲ್ಲೂಕಿನ ಹೆಬ್ಬುಳ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಕಾರೊಂದು ನಜ್ಜುಗುಜ್ಜಾಗಿರುವುದು
ಅಂಕೋಲಾ ತಾಲ್ಲೂಕಿನ ಹೆಬ್ಬುಳ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಕಾರೊಂದು ನಜ್ಜುಗುಜ್ಜಾಗಿರುವುದು   

ಅಂಕೋಲಾ: ತಾಲ್ಲೂಕಿನ ಹೆಬ್ಬುಳ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ಮಧ್ಯಾಹ್ನ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಒಂದು ಕಾರಿನ ಚಾಲಕ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಮಹಾದೇವ ಹೊಸ್ಮನಿ (27) ಮೃತಪಟ್ಟವರು. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಂಗ್ಲಭಾಷಾ ವಿಭಾಗದ ಪಿ.ಎಚ್.ಡಿ ವಿದ್ಯಾರ್ಥಿಯಾಗಿದ್ದರು. ಬೆಳಗಾವಿ ಮತ್ತು ಬಾಗಲಕೋಟೆಯ ಬೇರೆಬೇರೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಾಲ್ವರು ಸ್ನೇಹಿತರೊಂದಿಗೆ ಧರ್ಮಸ್ಥಳ ಪ್ರವಾಸಕ್ಕೆ ತೆರಳಿ ಅಲ್ಲಿಂದ ಧಾರವಾಡಕ್ಕೆ ವಾಪಸಾಗುತ್ತಿದ್ದರು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿಯ ಕುಟುಂಬವೊಂದು ಕಾರಿನಲ್ಲಿ ಯಲ್ಲಾಪುರ ಮಾರ್ಗವಾಗಿ ಗೋಕರ್ಣಕ್ಕೆ ತೆರಳುತ್ತಿತ್ತು. ಹೆಬ್ಬುಳ ಬಳಿಯ ತಿರುವಿನಲ್ಲಿ ಈ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಎರಡು ಕಾರುಗಳಲ್ಲಿದ್ದ ಒಂಬತ್ತು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಜಾಂಬೋಟಿಯವರಿದ್ದ ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಹಸುಗೂಸು ಹಾಗೂ ಇಬ್ಬರು ಮಹಿಳೆಯರೂ ಇದ್ದರು.

ADVERTISEMENT

ತಾಯಿಯ ತಲೆಗೆ ಏಟು ಬಿದ್ದಿದ್ದರಿಂದ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿಯ ಜೊತೆಯಲ್ಲಿದ್ದ ಮಗುವಿಗೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಗಾಯಗೊಂಡ ಇತರರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮಾನವೀಯತೆ ಮೆರೆದ ಯುವಕ

ಅಪಘಾತ ನಡೆದ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ತಕ್ಷಣಕ್ಕೆ ಆಂಬುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗಲಿಲ್ಲ. ಯುವಕನ ಸ್ನೇಹಿತರು ರಸ್ತೆಯ ಪಕ್ಕದಲ್ಲಿ ನಿಂತು ಸಹಾಯಕ್ಕಾಗಿ 3– 4 ವಾಹನಗಳಿಗೆ ಕೈಮಾಡಿ ನಿಲ್ಲಿಸಲು ಯತ್ನಿಸಿದ್ದರು. ಯಾರೊಬ್ಬರೂ ಸಹಾಯಕ್ಕೆ ಮುಂದೆ ಬರಲಿಲ್ಲ. ಈ ವೇಳೆ ಅದೇ ಮಾರ್ಗವಾಗಿ ಪುಣೆಯಿಂದ ಗೋಕರ್ಣಕ್ಕೆ ಬೈಕ್‌ನಲ್ಲಿ ಹೊರಟಿದ್ದ ಆಂಧ್ರಪ್ರದೇಶದ ಕರ್ನೂಲ್‌ನ ಯುವಕ ರವಿಪ್ರಕಾಶ ಸಹಾಯಕ್ಕೆ ಧಾವಿಸಿದರು.

ಅಪಘಾತಕ್ಕೊಳಗಾದ ಮಹಾದೇವ ಹೊಸ್ಮನಿಯ ಜೀವರಕ್ಷಣೆ ಉದ್ದೇಶದಿಂದ, ಅಪಘಾತಕ್ಕೊಳಪಟ್ಟ ಮತ್ತೊಬ್ಬ ಯುವಕನ ಸಹಾಯ ಪಡೆದು ತಮ್ಮ ಬೈಕ್‌ನಲ್ಲಿಯೇ ಕೂರಿಸಿಕೊಂಡರು. ಸುಮಾರು 45 ಕಿಲೋಮೀಟರ್ ದೂರದ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಸಿ.ಪಿ.ಐ ಕೃಷ್ಣಾನಂದ ನಾಯಕ ಮತ್ತು ಸಿಬ್ಬಂದಿ ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.