ADVERTISEMENT

ಶಿರಸಿ | ಬರದ ಪರಿಣಾಮ ಹೆಚ್ಚಿದ ಒಣಮೇವು ದರ

ರಾಜೇಂದ್ರ ಹೆಗಡೆ
Published 19 ನವೆಂಬರ್ 2023, 5:00 IST
Last Updated 19 ನವೆಂಬರ್ 2023, 5:00 IST
ಶಿರಸಿಯ ದಾಸನಕೊಪ್ಪದಲ್ಲಿ ರೈತರು ಭತ್ತದ ಹುಲ್ಲನ್ನು ವಾಹನಕ್ಕೆ ತುಂಬುತ್ತಿರುವುದು. 
ಶಿರಸಿಯ ದಾಸನಕೊಪ್ಪದಲ್ಲಿ ರೈತರು ಭತ್ತದ ಹುಲ್ಲನ್ನು ವಾಹನಕ್ಕೆ ತುಂಬುತ್ತಿರುವುದು.    

ಶಿರಸಿ: ಬರಗಾಲ, ಭತ್ತದ ಕ್ಷೇತ್ರ ಇಳಿಕೆ ಇನ್ನಿತರ ಕಾರಣದಿಂದ ಜಾನುವಾರುಗಳ ಒಣ ಮೇವು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದೇ ಇರುವ ಪರಿಣಾಮ ಸ್ಥಳೀಯವಾಗಿ ದರ ಗಣನೀಯವಾಗಿ ಏರಿಕೆಯಾಗಿದೆ.

ಭತ್ತದ ಕೃಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಸಾಕಿದ ಜಾನುವಾರುಗಳಿಗೆ ಬೇಕಾದಷ್ಟು ಒಣ ಹುಲ್ಲು ಸಾಕಾಗದೇ ಹೊರಭಾಗದಿಂದ ಹುಲ್ಲನ್ನು ತರಿಸುವವರ ಸಂಖ್ಯೆ ತಾಲ್ಲೂಕಿನೆಲ್ಲೆಡೆ ಹೆಚ್ಚಿದೆ. ಕಳೆದ ಒಂದು ತಿಂಗಳಿನಿಂದ ದಿನನಿತ್ಯ ರಸ್ತೆಗಳಲ್ಲಿ ಒಣ ಹುಲ್ಲು ತುಂಬಿಕೊಂಡು ಸಂಚರಿಸುವ ಹತ್ತಾರು ವಾಹನಗಳು ಕಾಣಸಿಗುತ್ತಿವೆ.

2022ರಲ್ಲಿ ಉತ್ತಮ ಮಳೆಯಾದ ಪರಿಣಾಮ ಹಸಿ ಹುಲ್ಲು ಲಭ್ಯತೆ ಉತ್ತಮವಾಗಿತ್ತು. ಆದರೆ ಈ ಬಾರಿ ವಾಡಿಕೆಯಷ್ಟು ಮಳೆಯಾಗಿಲ್ಲ. ಇದರಿಂದ ಕಳೆದ ಒಂದು ತಿಂಗಳಿಂದ ಹಸಿ ಹುಲ್ಲಿನ ಲಭ್ಯತೆ ಕೊರತೆ ಉಂಟಾಗಿ ಒಣಹುಲ್ಲಿನ ದರದಲ್ಲಿ ಏರಿಕೆ ಕಂಡುಬಂದಿದೆ. ಒಣ ಹುಲ್ಲಿನ ದರ ಈ ಹಿಂದೆ ಪ್ರತಿ ಟ್ರ್ಯಾಕ್ಟರ್‌ಗೆ ₹8 ಸಾವಿರ ಇತ್ತು. ಈಗ ₹10-₹13 ಸಾವಿರ  ಗಡಿ ದಾಟಿದೆ. ಜಿಲ್ಲೆಯಲ್ಲಿ ಭತ್ತ, ಜೋಳದ ಒಣಮೇವಿನ ದರದಲ್ಲಿ ಭಾರಿ ಏರಿಕೆಯಾಗುತ್ತಿರುವುದು ಕಂಡಿದ್ದು ರೈತರ ತಲೆಬಿಸಿ ಹೆಚ್ಚಿಸಿದೆ.

ADVERTISEMENT

ದೊಡ್ಡ ಹುಲ್ಲಿನ ಕಟ್ಟಿಗೆ ಕಳೆದ ಬಾರಿ ₹120-₹150 ಇತ್ತು. ಅದು ಈ ಬಾರಿ ₹180- ₹250 ರವರೆಗೂ ಇದೆ. ಒಂದು ಟ್ರ್ಯಾಕ್ಟರ್ ಹುಲ್ಲು ಸಟ್ಟಾ ಖರೀದಿಗೆ ಕಳೆದ ಬಾರಿ ₹7ರಿಂದ ₹9 ಸಾವಿರ ಇತ್ತು. ಅದು ಈ ಬಾರಿ ₹10ರಿಂದ ₹13 ಸಾವಿರದವರೆಗೂ ಇದೆ. ಹಾನಗಲ್, ಮುಂಡಗೋಡ, ಪಾಳಾ, ಕಲಘಟಗಿ, ಕಿರವತ್ತಿ, ಕಾತೂರು ಮುಂತಾದ ಬಯಲುಸೀಮೆ ಪ್ರದೇಶಗಳಿಂದ ಒಣ ಮೇವಿನ ಹುಲ್ಲು ತರಿಸಿಕೊಳ್ಳಲಾಗುತ್ತಿದೆ. 

ಬರಗಾಲ ಸನ್ನಿವೇಶ ಎದುರಿಸಲು ಈಗಾಗಲೇ ಆಸಕ್ತ ಹೈನುಗಾರರಿಗೆ ಮೇವಿನ ಬೀಜ ವಿತರಿಸಲು ಕ್ರಮವಹಿಸಲಾಗಿದೆ. ಪಶುಸಂಗೋಪನೆ ಇಲಾಖೆ ಸಂಪರ್ಕಿಸಿದರೆ ಬೀಜ ಪೂರೈಸಲಾಗುವುದು.
ಡಾ.ಗಜಾನನ, ಪಶುಸಂಗೋಪನೆ ಇಲಾಖೆ, ವೈದ್ಯಾಧಿಕಾರಿ

‘ಸಮರ್ಪಕವಾಗಿ ಮಳೆಗಾಲವಾಗದೇ ಇರುವುದರಿಂದ ಬಯಲುಸೀಮೆ ಪ್ರದೇಶಗಳಲ್ಲಿ ಉತ್ತಮವಾಗಿ ಭತ್ತದ ಬೆಳೆ ಬಂದಿಲ್ಲ. ಜತೆಯಲ್ಲಿ ಈ ಭಾಗದಲ್ಲಿ ಕಾಡುಪ್ರಾಣಿಗಳ ಕಾಟ, ಬೆಳೆಯ ಇಳುವರಿ ಕಡಿಮೆಯಾಗಿರುವುದು, ಭತ್ತ ಕ್ಷೇತ್ರ ಕ್ಷೀಣಿಸುತ್ತಿರುವುದರಿಂದ ಭತ್ತ ಹಾಗೂ ಹುಲ್ಲಿನ ದರದಲ್ಲಿ ಜಿಗಿತ ಕಂಡಿದೆ. ಇದು ಹೈನೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂಬುದು ಶಿರಸಿಯ ಹೈನುಗಾರ ಸತೀಶ ನಾಯ್ಕ ಅವರ ಅಭಿಪ್ರಾಯ. 

ಹುಲ್ಲು ಮಾರಾಟಕ್ಕೆ ಆಸಕ್ತಿ

ನೀರಿನ ಕೊರತೆ ಕಾರಣಕ್ಕೆ ಈ ಬಾರಿ ಬನವಾಸಿ ಹೋಬಳಿಯಲ್ಲಿ ಭತ್ತ ಸರಿಯಾಗಿ ಬೆಳವಣಿಗೆಯಾಗಿಲ್ಲ. ತೆನೆಯೂ ಸರಿಯಾಗಿ ಕಚ್ಚಿಲ್ಲ. ಇದರಿಂದ ಕಂಗೆಟ್ಟ ರೈತರು ಒಣಹುಲ್ಲಿಗೆ ದರ ಏರಿಕೆಯಾಗಿರುವುದರಿಂದ ಸಮಾಧಾನದಲ್ಲಿದ್ದಾರೆ. ‘ಆರಂಭದಲ್ಲಿ ಉತ್ತಮ ಮಳೆ ಬಿದ್ದಿದ್ದರೂ ಬಳಿಕ ಕೊರತೆ ಉಂಟಾಯಿತು. ಇದರಿಂದ ನಿರೀಕ್ಷೆಯಷ್ಟು ಫಸಲು ಸಿಕ್ಕಿಲ್ಲ. ಆದರೆ ಒಣಹುಲ್ಲು ಮಾತ್ರ ಉತ್ತಮವಾಗಿ ಸಿಕ್ಕಿದೆ. ಹೀಗಾಗಿ ಈ ಭಾಗದಲ್ಲಿ ಒಣಹುಲ್ಲು ಮಾರಾಟಕ್ಕೆ ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಭತ್ತ ಬೆಳೆಯಲು ಮಾಡಿದ ಖರ್ಚನ್ನು ಹುಲ್ಲು ಮಾರಾಟದ ಮೂಲಕವಾದರೂ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ’ ಎನ್ನುತ್ತಾರೆ ರೈತ ಸುದರ್ಶನ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.