ADVERTISEMENT

ಹವಾಮಾನ ವೈಪರೀತ್ಯ: ಶುಂಠಿ ಖರೀದಿಗೆ ಹಿಂದೇಟು; ಕಂಗೆಟ್ಟ ರೈತರು, ವ್ಯಾಪಾರಿಗಳು

ಗಣಪತಿ ಹೆಗಡೆ
Published 14 ಏಪ್ರಿಲ್ 2022, 5:23 IST
Last Updated 14 ಏಪ್ರಿಲ್ 2022, 5:23 IST
ರೈತರಿಂದ ಖರೀದಿಸಿದ ಶುಂಠಿಯನ್ನು ಕಲಕರಡಿ ಗ್ರಾಮದ ಗದ್ದೆಯಲ್ಲಿ ವ್ಯಾಪಾರಿಗಳು ಒಣಗಲು ಹರಡಿ ಇಟ್ಟಿರುವುದು
ರೈತರಿಂದ ಖರೀದಿಸಿದ ಶುಂಠಿಯನ್ನು ಕಲಕರಡಿ ಗ್ರಾಮದ ಗದ್ದೆಯಲ್ಲಿ ವ್ಯಾಪಾರಿಗಳು ಒಣಗಲು ಹರಡಿ ಇಟ್ಟಿರುವುದು   

ಶಿರಸಿ: ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇದೆ. ಆಗಾಗ ಸುರಿಯುತ್ತಿರುವ ಮಳೆಯಿಂದ ಶುಂಠಿ ಸಂಸ್ಕರಣೆಗೆ ಅಡ್ಡಿಯಾಗುತ್ತಿದೆ. ಇದು ರೈತರನ್ನು, ಖರೀದಿದಾರರನ್ನು ಆತಂಕಕ್ಕೆ ತಳ್ಳಿದೆ.

ತಾಲ್ಲೂಕಿನ ಪೂರ್ವಭಾಗ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಬೆಳೆಗಾರರ ಸಂಖ್ಯೆ ಹೆಚ್ಚಿದೆ. 250 ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯ ರೈತರು ಈ ಬೆಳೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಫಸಲು ಕೀಳುವ ಅವಧಿಯಲ್ಲಿ ಅನಿಶ್ಚಿತ ವಾತಾವರಣ ಎದುರಾಗಿದ್ದರಿಂದ ದರದಲ್ಲೂ ಏರುಪೇರು ಉಂಟಾಗುವ ಆತಂಕ ರೈತರನ್ನು ಕಾಡುತ್ತಿದೆ.

ಮಾರ್ಚ್ ಬಳಿಕ ರೈತರು ಗದ್ದೆಯಿಂದ ಶುಂಠಿ ಕೀಳುತ್ತಾರೆ. ಕೆಲವರು ಹಸಿ ಶುಂಠಿಯನ್ನೇ ಮಾರಾಟ ಮಾಡಿದರೆ, ಇನ್ನೂ ಹಲವರು ಶುಂಠಿ ಒಣಗಿಸಿ ಮಾರಾಟ ಮಾಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಶುಂಠಿ ಸರಾಸರಿ ಪ್ರತಿ ಕ್ವಿಂಟಲ್‍ಗೆ ₹1,500 ರಿಂದ ₹2,200 ದರಕ್ಕೆ ಮಾರಾಟ ಕಾಣುತ್ತಿದೆ. ಒಣ ಶುಂಠಿ ಕೆಜಿಗೆ ₹120ರ ದರದ ಆಸುಪಾಸಿನಲ್ಲಿದೆ.

ADVERTISEMENT

ಮೋಡ ಕವಿದ ವಾತಾವರಣ, ಅಕಾಲಿಕ ಮಳೆಯಿಂದ ಶುಂಠಿ ಸಂಸ್ಕರಣೆಗೆ ಅಡ್ಡಿಯಾಗುತ್ತಿದೆ. ಒಣಗಲು ಇಟ್ಟ ಶುಂಠಿ ಮಳೆ ನೀರಿಗೆ ಸಿಲುಕಿ ಹಾಳಾಗುತ್ತಿದೆ. ಹೀಗಾಗಿ ಖರೀದಿದಾರರು ಹಸಿ ಶುಂಠಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ನೆರೆಯ ಸೊರಬ, ಆನವಟ್ಟಿಯಿಂದ ಬರುತ್ತಿದ್ದ ವ್ಯಾಪಾರಿಗಳ ಸಂಖ್ಯೆಯಲ್ಲೀ ಇಳಿಕೆಯಾಗಿದೆ. ರೈತರು ಹಸಿ ಶುಂಠಿ ಮಾರಲಾಗದೆ, ಶುಂಠಿ ಒಣಗಿಸಲಾಗದೆ ಸಂದಿಗ್ಧತೆಗೆ ಸಿಲುಕಿದ್ದಾರೆ.

‘ಹಸಿ ಶುಂಠಿಯನ್ನು ತೊಳೆದು ಒಣಗಲು ಇಟ್ಟರೆ ಎರಡು ವಾರಗಳ ಕಾಲ ಒಣಗಲು ಬಿಡಬೇಕಾಗುತ್ತದೆ. ಒಮ್ಮೆ ಮಳೆಗೆ ಸಿಕ್ಕರೂ ಶಿಲೀಂಧ್ರಗಳು ಸೋಕಿ ಹಾಳಾಗುತ್ತವೆ. ಕೆಲವು ಬಾರಿ ಪುನಃ ತೊಳೆದು ಆರಂಭಿಕ ಹಂತದಿಂದ ಸಂಸ್ಕರಣೆ ಕೆಲಸ ಕೈಗೊಳ್ಳಬೇಕಾಗುತ್ತದೆ. ಇದು ಹೆಚ್ಚು ವೆಚ್ಚದಾಯಕವೂ ಹೌದು’ ಎನ್ನುತ್ತಾರೆ ಶುಂಠಿ ವ್ಯಾಪಾರಿ ಅಜೀಜ್.

ಈ ಹಿಂದೆ ಖರೀದಿಸಲಾದ ಶುಂಠಿಗಳನ್ನು ವ್ಯಾಪಾರಿಗಳು ಗದ್ದೆಗಳಲ್ಲೇ ಒಣಗಿಸುತ್ತಿರುವ ದೃಶ್ಯಗಳು ಬನವಾಸಿ, ಕಲಕರಡಿ, ಅಂಡಗಿ, ಮಧುರವಳ್ಳಿ, ಬಂಕನಾಳ, ಕಿರವತ್ತಿ, ಇನ್ನಿತರ ಭಾಗದಲ್ಲಿ ಕಾಣಸಿಗುತ್ತಿದೆ. ಮಳೆ ಆತಂಕದಿಂದ ವ್ಯಾಪಾರಿಗಳು ಅವುಗಳನ್ನು ಕಾಯತೊಡಗಿದ್ದಾರೆ.

ಕೆಲವು ದಿನಗಳಿಂದ ಅನಿಶ್ಚಿತ ವಾತಾವರಣ ಉಂಟಾಗುತ್ತಿರುವ ಕಾರಣ ಶುಂಠಿ ಖರೀದಿಗೆ ಬರುವ ವ್ಯಾಪಾರಿಗಳ ಸಂಖ್ಯೆ ಇಳಿಕೆಯಾಗಿದೆ.

- ಸಂತೋಷ ನಾಯ್ಕ ಕಲಕರಡಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.