ADVERTISEMENT

ಉತ್ತರ ಕನ್ನಡ: ಅನಧಿಕೃತ ಆಸ್ತಿಗೆ ಬಿ–ಖಾತಾ ಭಾಗ್ಯ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಂದೋಲನ ಇಂದಿನಿಂದ: ಮಾಹಿತಿ ವಿನಿಯಮಕ್ಕೆ ಸಿದ್ಧತೆ

ಗಣಪತಿ ಹೆಗಡೆ
Published 18 ಫೆಬ್ರುವರಿ 2025, 5:25 IST
Last Updated 18 ಫೆಬ್ರುವರಿ 2025, 5:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಾರವಾರ: ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ಆಸ್ತಿಗಳ ಮಾಲೀಕರು ಮುಂದಿನ ವರ್ಷದಿಂದ ದುಪ್ಪಟ್ಟು ಕರ ಪಾವತಿಸುವ ಸಮಸ್ಯೆ ನೀಗಲಿದೆ. ಅಧಿಕೃತ ಅಲ್ಲದ ಆಸ್ತಿಗಳಿಗೆ ಬಿ–ಖಾತಾ ಒದಗಿಸಲು ರಾಜ್ಯ ಸರ್ಕಾರ ಫೆ.11 ರಂದು ಅಧಿಸೂಚನೆ ಹೊರಡಿಸಿ, ಆದೇಶಿಸಿದೆ.

ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 7,245 ಅನಧಿಕೃತ ಆಸ್ತಿಗಳಿದ್ದು, ಅವುಗಳಿಗೆ ಅರ್ಹವಾದವುಗಳಿಗೆ ಬಿ–ಖಾತಾ ನೀಡಲು ಫೆ.18 ರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಅಭಿಯಾನ ಆರಂಭಗೊಳ್ಳಲಿದೆ. ಇದಕ್ಕಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು, ಸಿದ್ಧತೆ ಮಾಡಿಕೊಳ್ಳಲಾಗಿದೆ.

ADVERTISEMENT

ನಕ್ಷೆ ಉಲ್ಲಂಘನೆ, ಪಾರ್ಕಿಂಗ್ ಜಾಗಕ್ಕೆ ಅವಕಾಶ ಕಲ್ಪಿಸದಿರುವುದು, ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮಹಡಿ ನಿರ್ಮಿಸಿರುವುದು ಸೇರಿದಂತೆ ನಿಯಮ ಮೀರಿದ ಕಟ್ಟಡಗಳು ಬಿ–ಖಾತಾ ಪಡೆಯುವುದರೊಂದಿಗೆ ಫಾರಂ ನಂ–3ಎ ಪಡೆಯಲು ಅವಕಾಶ ಸಿಗಲಿದೆ. ಇದರಿಂದ ಅನಧಿಕೃತ ಕಟ್ಟಡಗಳ ಮಾಲೀಕರು ಪ್ರತಿ ವರ್ಷ ದುಪ್ಪಟ್ಟು ಪ್ರಮಾಣದ ಕರ ಪಾವತಿಸುವ ಸಮಸ್ಯೆಯಿಂದ ನಿರಾಳರಾಗಲಿದ್ದಾರೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಾರೆ.

ಕರ್ನಾಟಕ ಪೌರಾಡಳಿತ ನಿಯಮಗಳು– 1977 ಹಾಗೂ ಕರ್ನಾಟಕ ಪೌರಾಡಳಿತ ಕಾಯ್ದೆ– 1976ರ ಕೆಲವು ನಿಯಮಾವಳಿಗೆ ತಿದ್ದುಪಡಿಗಳನ್ನು ತಂದು ಜ.2 ರಂದು ಕರಡು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಫೆ.2ರ ವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಫೆ.11 ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅಧಿಕೃತ ಅಲ್ಲದ ಆಸ್ತಿಗಳನ್ನು ಅಧಿಕೃತ ಎಂದು ಘೋಷಿಸಲು ಮುಂದಡಿ ಇಟ್ಟಿದೆ.

ಅನಧಿಕೃತ ನಿವೇಶನಗಳನ್ನು ತಡೆಯಲು ಸುಪ್ರಿಂ ಕೋರ್ಟ್ ನೀಡಿರುವ ಕಟ್ಟುನಿಟ್ಟಿನ ಆದೇಶ ಪಾಲನೆಯಾದರೆ ನಗರ ವ್ಯಾಪ್ತಿಯಲ್ಲಿನ ಹಲವು ಆಸ್ತಿಗಳು ತೆರವುಗೊಳ್ಳಬಹುದಾದ ಕಾರಣಕ್ಕೆ ಆಸ್ತಿಗಳ ರಕ್ಷಣೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಆಸ್ತಿ ತೆರಿಗೆಯ ಮೂಲಕ ಆದಾಯ ಸಂಗ್ರಹಿಸಲು ದಾರಿಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನಸಾಮಾನ್ಯರಿಗೆ ಹೆಚ್ಚು ಅನುಕೂಲ

‘ನಗರ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ 2107ರಲ್ಲಿ ಪರಿಷ್ಕೃತಗೊಂಡಿದ್ದ ನಿಯಮಾವಳಿಯಿಂದ ಜನಸಾಮಾನ್ಯರು ಕಟ್ಟಡ, ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಸಮಸ್ಯೆ ಉಂಟಾಗಿತ್ತು. ಚಿಕ್ಕ ಜಾಗ ಹೊಂದಿರುವ ಜನಸಾಮಾನ್ಯರಂತೂ ಜಾಗ ಇದ್ದರೂ ಮನೆ ನಿರ್ಮಿಸಿಕೊಳ್ಳಲು ಅನುಮತಿಗೆ ಪರದಾಡಬೇಕಾಗಿತ್ತು. ಇದರಿಂದ ಹಲವೆಡೆ ಅನಧಿಕೃತ ಕಟ್ಟಡಗಳೆ ತಲೆ ಎತ್ತುವಂತಾಯಿತು. ರಾಜ್ಯ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಬಿ–ಖಾತಾ ನೀಡಲು ಮುಂದಾಗಿದ್ದರಿಂದ ಜನಸಾಮಾನ್ಯರಿಗೆ ಹೆಚ್ಚು ಅನುಕೂಲ ಆಗಲಿದೆ. ಪ್ರತಿ ವರ್ಷ ದುಪ್ಪಟ್ಟು ಕರ ಪಾವತಿಸುವ ಜೊತೆಗೆ ಅನಧಿಕೃತ ಆಸ್ತಿದಾರರು ಅನಗತ್ಯ ಕಿರುಕುಳ ಅನುಭವಿಸುವುದು ತಪ್ಪಲಿದೆ. ಫಾರಂ ನಂ–3ಎ ಸಿಗುವ ಕಾರಣದಿಂದ ಬ್ಯಾಂಕ್ ಸಾಲ ಪಡೆಯಲು ನೆರವಾಗಲಿದೆ’ ಎನ್ನುತ್ತಾರೆ ಕ್ರೆಡಾಯ್ ಕಾರವಾರ ಘಟಕದ ಮಾಜಿ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.