ADVERTISEMENT

ಬಡವರ ಹಸಿವು ತಿಳಿಸುವ ‘ರೋಜಾ’

ಜಿಲ್ಲೆಯಲ್ಲಿ ರಂಜಾನ್ ಉಪವಾಸ ವ್ರತ ಆಚರಣೆ; ಮುಸ್ಲಿಮರ ಮನೆಗಳಲ್ಲೀಗ ಸಹರಿ, ಇಫ್ತಾರ್ ಕೂಟಗಳು

ದೇವರಾಜ ನಾಯ್ಕ
Published 29 ಮೇ 2019, 5:11 IST
Last Updated 29 ಮೇ 2019, 5:11 IST
ಕಾರವಾರದ ಹೈಚರ್ಚ್‌ ರಸ್ತೆಯಲ್ಲಿರುವ ಸದ್ದಾಂ ಅವರ ಕುಟುಂಬ ‘ಸಹರಿ’ಯ ಉಪಹಾರ ಸೇವನೆಯಲ್ಲಿ ತೊಡಗಿರುವುದು - ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್
ಕಾರವಾರದ ಹೈಚರ್ಚ್‌ ರಸ್ತೆಯಲ್ಲಿರುವ ಸದ್ದಾಂ ಅವರ ಕುಟುಂಬ ‘ಸಹರಿ’ಯ ಉಪಹಾರ ಸೇವನೆಯಲ್ಲಿ ತೊಡಗಿರುವುದು - ಪ್ರಜಾವಾಣಿ ಚಿತ್ರ: ದಿಲೀಪ್ ರೇವಣಕರ್   

ಕಾರವಾರ:ಮುಸ್ಲಿಮ್ ಧರ್ಮೀಯರಿಗೆಪವಿತ್ರವಾದರಂಜಾನ್ ಮಾಸ ಆರಂಭವಾಗಿ ಇಂದಿಗೆ (ಬುಧವಾರ) 23 ದಿನವಾಗಿದೆ. ಇನ್ನೂ ಏಳು ದಿನ ರಂಜಾನ್ ಉಪವಾಸ ವ್ರತವನ್ನು (ರೋಜಾ) ಅವರು ಕಟ್ಟುನಿಟ್ಟಾಗಿಕೈಗೊಳ್ಳಲಿದ್ದಾರೆ. ವ್ರತದ ನಿಯಮಗಳನ್ನು ನಗರದ ಸದ್ದಾಂ ಹುಸೇನ್ ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

ಬಿಣಗಾದಲ್ಲಿ ‘ಎಸ್.ವಿ.ಬ್ರದರ್ಸ್ ಬ್ಲಾಕ್ ಇಂಡಸ್ಟ್ರೀಸ್‌’ ನಡೆಸುವ ಸದ್ದಾಂ, ನಗರದ ಹೈಚರ್ಚ್ ರಸ್ತೆಯಲ್ಲಿ ಮನೆಯನ್ನು ಹೊಂದಿದ್ದಾರೆ. ತಂದೆದಸ್ತಗಿರ್ ಸೈಯದ್, ತಾಯಿ ಮೆಹಬೂಬಿ,ಸಹೋದರಿಯರಾದಶೈನಾಜ್ ಹಾಗೂ ಸಂಶಾದ್, ಸಹೋದರ ಭಾಷಾ ಅವರೊಂದಿಗೆ ವಾಸಿಸುತ್ತಿದ್ದಾರೆ. ರಂಜಾನ್ ರೋಜಾದ ಬಗ್ಗೆ ತಿಳಿಸಲು ಅವರು ತಮ್ಮ ಮನೆಗೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಬೆಳಿಗ್ಗೆ 4.15 ಆಗಿತ್ತು. ಅವರಬಾವಬಂದೆ ನವಾಜ್, ಸ್ನೇಹಿತರಾದ ಫಹೀಂ, ಮೊಹಮ್ಮದ್ ಸಾಕಿಬ್, ಇಬ್ರಾಹಿಂ ಕೂಡ ಉಪವಾಸ ವ್ರತದ ಆರಂಭಕ್ಕೆ ಅವರ ಮನೆಯಲ್ಲಿ ಜತೆಗೂಡಿದ್ದರು.

ಸದ್ದಾಂ ಅವರ ತಂಗಿಸಂಶಾದ್, ಚಿಕನ್ ಬಿರಿಯಾನಿ, ಚಪಾತಿ, ಖೀರ್ (ಪಾಯಸ), ಫ್ರುಟ್ ಸಲಾಡ್ ಹಾಗೂ ಮಾವಿನ ಹಣ್ಣಿನಜ್ಯೂಸ್‌ ಅನ್ನುತಯಾರಿಸಿ, ಮನೆಯಲ್ಲಿದ್ದವರಿಗೆ ಅವುಗಳನ್ನು ಉಣ ಬಡಿಸಿದ್ದರು. ಬೆಳಿಗ್ಗಿನ ಅವಧಿಯಲ್ಲಿ ಆರಂಭವಾಗುವ ಉಪವಾಸದ ವಿಧಾನವನ್ನು ‘ಸಹರಿ’ ಎಂದೂ, ಸಂಜೆಯ ವೇಳೆಗೆ ವ್ರತದ ಮುಕ್ತಾಯವನ್ನು ‘ಇಫ್ತಾರ್’ ಎಂದೂ ಕರೆಯಲಾಗುತ್ತದೆ. ಎಲ್ಲರೂ ಕೆಳಗೆ ಕುಳಿತು ಒಟ್ಟಿಗೆ ಉಪಾಹಾರ ಸೇವಿಸಿ, ಮುಕ್ತಾಯಗೊಳಿಸುತ್ತಿದ್ದಂತೆ ಸಮೀಪದ ಮಸೀದಿಯಲ್ಲಿ ‘ನಮಾಜ್’ (ಶಾಸ್ತ್ರ) ಪ್ರಾರಂಭವಾಗಿತ್ತು. ನಂತರ ಸದ್ದಾಂ ‘ಪ್ರಜಾವಣಿ’ಯ ಜತೆ ರಂಜಾನ್ ಉಪವಾಸದ ಮಹತ್ವಗಳನ್ನು ಹಂಚಿಕೊಂಡರು.

ADVERTISEMENT

‘ಕಟ್ಟುನಿಟ್ಟಿನ ವ್ರತ:‘ಬಡವರ ಹಸಿವು ತಿಯಲೆಂದು,ಅವರ ಮೇಲೆ ಕನಿಕರ ಮೂಡಲೆಂದುರಂಜಾನ್‌ ಮಾಸದಲ್ಲಿ ಉಪವಾಸ ವ್ರತ (ರೋಜಾ) ಕೈಗೊಳ್ಳಲಾಗುತ್ತದೆ.ಜತೆಗೆ, ಆರೋಗ್ಯ ವೃದ್ಧಿಯ ಉದ್ದೇಶ ಕೂಡ ಇದರ ಹಿಂದಿದೆ’ ಎಂದು ಅವರು ವಿವರಿಸಿದರು.

‘ಉರ್ದು ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳನ್ನು ರಂಜಾನ್‌ ಮಾಸವಾಗಿ ಅಚರಿಸಲಾಗುತ್ತದೆ. ಪವಿತ್ರ ಗ್ರಂಥ ಕುರ್– ಆನ್‌ನಲ್ಲಿ ಉಪವಾಸ ವ್ರತದ ಬಗ್ಗೆ ಉಲ್ಲೇಖವಿದೆ. ಅದರಂತೆ ಪ್ರತಿಯೊಬ್ಬ ಮುಸಲ್ಮಾನರೂಈ ತಿಂಗಳಲ್ಲಿ ಉಪವಾಸ ವ್ರತ (ರೋಜಾ) ಮಾಡುತ್ತಾರೆ.ಈ ಬಾರಿ ಮೇ 7ರಿಂದ ವ್ರತಾಚರಣೆ ಆರಂಭವಾಗಿದ್ದು, ಜೂನ್ 5ರಂದು ಮುಕ್ತಾಯಗೊಳ್ಳಲಿದೆ’ ಎಂದು ಹೇಳಿದರು.

‘ಸೂರ್ಯೋದಯಕ್ಕೂ ಮುನ್ನ ಈ ವ್ರತ ಆರಂಭಿಸಿ, ಸೂರ್ಯಾಸ್ತದ ಬಳಿಕ ಅದನ್ನು ಅಂತ್ಯಗೊಳಿಸಲಾಗುತ್ತದೆ. ಈ ಉಪವಾಸದ ಸಂದರ್ಭದಲ್ಲಿ ಒಂದು ಗುಟುಕು ನೀರನ್ನೂ ಕೂಡ ಕುಡಿಯುವುದಿಲ್ಲ. ಅಷ್ಟೊಂದು ಕಟ್ಟುನಿಟ್ಟಾಗಿ ವ್ರತ ಮಾಡುತ್ತೇವೆ. ಸಂಜೆವೇಳೆ ಮಸೀದಿಗೆ ತೆರಳಿ ‘ತರಾಬಿ’ಯನ್ನೂ(ಪ್ರಾರ್ಥನೆ) ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಸಾಮಾನ್ಯವಾಗಿ ಈ ವ್ರತ ಬೆಳಿಗ್ಗೆ 4.45ರಿಂದ ಆರಂಭವಾಗಿ ಸಂಜೆ 7ರವರೆಗೆ ಇರುತ್ತದೆ. ರೋಜಾ ಅಂತ್ಯಗೊಳಿಸಿದ ಮೇಲೆ ಎಲ್ಲರೂ ರಾತ್ರಿ ಊಟಕ್ಕೆ ಸಿದ್ಧರಾಗುತ್ತೇವೆ’ ಎಂದೂಹೇಳಿದರು.

ಇಸ್ಲಾಂನ ಐದು ತತ್ವಗಳು:ಇಸ್ಲಾಂ ಧರ್ಮವು ಪ್ರಮುಖ ಐದು ತತ್ವಗಳನ್ನು ಆಧರಿಸಿದೆ. ಅವುಗಳೆಂದರೆ,ಶಹದತ್ (ದೇವರು ಹಾಗೂ ಅವನ ಪ್ರವಾದಿಯ ಮೇಳೆ ನಂಬಿಕೆ ಇಡುವುದು),ಸಮಾಜ್(ಪ್ರಾರ್ಥನೆ), ರೋಜಾ(ಉಪವಾಸ), ಜಕಾತ್ (ದಾನ) ಹಾಗೂ ಹಜ್ (ಮೆಕ್ಕಾಗೆ ಪವಿತ್ರ ಯಾತ್ರೆ) ಎಂದು ಸದ್ದಾಂ ಸ್ನೇಹಿತಫಹೀಂ ಹೇಳಿದರು.

‘ಬಡವರಿಗೆ ದಾನ ನೀಡುವುದು ಕಡ್ಡಾಯ’

ಇಸ್ಲಾಂ ಧರ್ಮದ ಪ್ರಕಾರ ಮುಸ್ಲಿಮರು ತಮ್ಮ ಆದಾಯದಲ್ಲಿ ಶೇ 2.5ರಷ್ಟನ್ನು ಬಡವರಿಗೆ ದಾನ (ಜಕಾತ್‌/ ಕೈರಾತ್) ನೀಡುವುದು ಕಡ್ಡಾಯ. ರಂಜಾನ್‌ ತಿಂಗಳಲ್ಲಿ ಬಡವರು, ನೆರೆ ಹೊರೆಯವರು, ಅಶಕ್ತರಿಗೆ ಆದ್ಯತೆ ಮೇರೆಗೆ ದಾನ ಮಾಡಲಾಗುತ್ತದೆ. ಚಿನ್ನ, ಬೆಳ್ಳಿ ಇದ್ದರೆ ಅದರ ಮೌಲ್ಯವನ್ನೂ ಲೆಕ್ಕಹಾಕಿ ಶೇ 2.5ರಷ್ಟನ್ನು ಹಣದ ರೂಪದಲ್ಲಿ ದಾನ ಮಾಡಲಾಗುವುದು ಎಂದು ಸದ್ದಾಂ ತಿಳಿಸಿದರು.

ರಂಜಾನ್‌ ಮಾಸದ ಕೊನೆಯ ದಿನ ಚಂದ್ರನನ್ನು ನೋಡಿದ ನಂತರ ಹಾಗೂ ಮರುದಿನ ಬೆಳಿಗ್ಗೆ ಈದ್‌ ಪ್ರಾರ್ಥನೆ ಸಲ್ಲಿಸುವ ನಡುವಿನ ಅಂತರದಲ್ಲಿ ಬಡವರಿಗೆ ಮನೆಯಲ್ಲಿ ಬಳಸುವ ಆಹಾರ ಧಾನ್ಯಗಳನ್ನು ಕೊಡುವುದನ್ನು ‘ಫಿತ್ರ್’ ಎನ್ನಲಾಗುತ್ತದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.