ADVERTISEMENT

ಹೊಸ ಸದಸ್ಯರ ಆಯ್ಕೆ ಪ್ರಕ್ರಿಯೆ ವಿಳಂಬ

ಭಟ್ಕಳ ಪುರಸಭೆ ಸದಸ್ಯರ ಅವಧಿ ಮುಕ್ತಾಯ: ಆಡಳಿತಾಧಿಕಾರಿಯಾಗಿ ಎ.ಸಿ ಅಧಿಕಾರ ಸ್ವೀಕಾರ

ರಾಘವೇಂದ್ರ ಭಟ್ಟ
Published 12 ಮಾರ್ಚ್ 2019, 19:52 IST
Last Updated 12 ಮಾರ್ಚ್ 2019, 19:52 IST
ಭಟ್ಕಳದ ಪುರಸಭೆ ಕಚೇರಿ
ಭಟ್ಕಳದ ಪುರಸಭೆ ಕಚೇರಿ   

ಭಟ್ಕಳ: ಐದು ವರ್ಷಗಳ ಹಿಂದೆ ಗದ್ದುಗೆಯೇರಿದ್ದ ಭಟ್ಕಳ ಪುರಸಭೆಯ 23 ಸದಸ್ಯರ ಅಧಿಕಾರವಧಿ ಮಾರ್ಚ್ 11ಕ್ಕೆ ಮುಕ್ತಾಯವಾಗಿದೆ.ಪುರಸಭೆಯ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಮಾರ್ಚ್ 12ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಪುರಸಭೆಯ ಹಾಲಿ ಅಧ್ಯಕ್ಷರಾಗಿ ಸಾದಿಕ್ ಮಟ್ಟಾ, ಉಪಾಧ್ಯಕ್ಷರಾಗಿ ಕೆ.ಎಂ ಆಶ್ಪಾಖ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖೈಸರ್ ಮೊಹತೇಶಾಂ ಅಧಿಕಾರ ಹೊಂದಿದ್ದರು. ಪಟ್ಟಣ ವ್ಯಾಪ್ತಿಯ 23 ವಾರ್ಡ್‌ಗಳನ್ನು ಪುರಸಭೆ ಹೊಂದಿದೆ.

ಭಟ್ಕಳ ಪುರಸಭೆಗೆ ಸದಸ್ಯರಾಗಿ ಆಯ್ಕೆಯಾಗುವ ಹೆಚ್ಚಿನ ಸದಸ್ಯರು ತಂಝೀಮ್ ಸಂಸ್ಥೆಯ ಬೆಂಬಲಿತರು.ಸುಮಾರು15 ಸದಸ್ಯರುಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ತಂಝೀಮ್ ಬೆಂಬಲಿತ ಮತ್ತು ಸೂಚಿತ ಅಭ್ಯರ್ಥಿಯೇ ಇಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಬಂದರೆ ಬೇರೆ ಸಮುದಾಯಕ್ಕೆ ಸೇರಿದವರು ಹುದ್ದೆಯನ್ನು ಅಲಂಕರಿಸುತ್ತಾರೆ.

ADVERTISEMENT

ಒಳಚರಂಡಿ, ನೀರಿನ ಸಮಸ್ಯೆ: ಭಟ್ಕಳ ಪುರಸಭೆಯನ್ನು ಒಳಚರಂಡಿ ಸಮಸ್ಯೆ ಕಾಡುತ್ತಿದೆ. ಪಟ್ಟಣದ ಇಕ್ಕೆಲಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯುತ್ತದೆ. ಕಲುಷಿತ ನೀರು ಕುಡಿಯುವ ನೀರಿನ ಬಾವಿಗೆ ಹರಿದುಬರುತ್ತದೆ.

ಈ ಸಮಸ್ಯೆ ಹತ್ತಾರು ವರ್ಷಗಳಿಂದ ಇದ್ದು, ಇದಕ್ಕೆ ಈವರೆಗೆ ಸರಿಯಾದ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ ಎಂಬುದುಪಟ್ಟಣದ ಹಲವು ವಾರ್ಡ್ ಜನರ ಆರೋಪವಾಗಿದೆ. ಕಸ ವಿಲೇವಾರಿ ಸಹ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬ ಬೇಸರವೂ ಸಾಮಾನ್ಯವಾಗಿದೆ.

ಪರಿಹಾರ ಒದಗಿಸಲಾಗಿದೆ:‘ನನ್ನ ಅಧಿಕಾರದ ಎರಡೂವರೆ ವರ್ಷಗಳ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದೇನೆ’ ಎಂದು ಹಾಲಿ ಅಧ್ಯಕ್ಷರಾಗಿದ್ದ ಸಾದಿಕ್ ಮಟ್ಟಾ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮುಖ್ಯವಾಗಿ ಪಟ್ಟಣದಲ್ಲಿ ಶೇ 90ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಎಂಟುವಾಹನಗಳಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ ಸುಮಾರು₹ 200 ಕೋಟಿ ವೆಚ್ಚದ ಒಳಚರಂಡಿ ಯೋಜನೆಗೆ ಈಗಾಗಲೇ ಟೆಂಡರ್ ಆಗಿದೆ’ ಎಂದರು.

ಪುರಸಭೆಗೆ ಲೋಕಸಭೆ ಚುನಾವಣೆಯ ಬಳಿಕ ಚುನಾವಣೆನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

‘ಪ್ರತಿದಿನ ಪರಿಶೀಲನೆ’:ಪುರಸಭೆಯ ಆಡಳಿತಾಧಿಕಾರಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡಿರುವ ಉಪ ವಿಭಾಗಾಧಿಕಾರಿ ಸಾಜಿದ ಅಹಮ್ಮದ್ ಮುಲ್ಲಾ ಮಾತನಾಡಿ, ಪುರಸಭೆ ವ್ಯಾಪ್ತಿಯ ಜನರ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

‘ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಜತೆಗೆ ಪ್ರತಿದಿನ ಪುರಸಭೆ ಕಚೇರಿಗೆ ತೆರಳಿ ಪರಿಶೀಲಿಸುತ್ತೇನೆ. ಏನೇ ಸಮಸ್ಯೆಗಳಿದ್ದರೂ ನನ್ನನ್ನು ಸಂಪರ್ಕಿಸಬಹುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.