ADVERTISEMENT

ಮತ್ತೆ ಚಿಗುರಿದ ಹೆಸ್ಕಾಂ ಉಪಕೇಂದ್ರದ ನಿರೀಕ್ಷೆ

ಕಾನಸೂರು, ಹತ್ತರಗಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯ ಪ್ರಸ್ತಾವ

ಸಂಧ್ಯಾ ಹೆಗಡೆ
Published 27 ಆಗಸ್ಟ್ 2019, 14:53 IST
Last Updated 27 ಆಗಸ್ಟ್ 2019, 14:53 IST
ಶಿರಸಿ ಸ್ಟೇಷನ್‌ನಲ್ಲಿರುವ ವಿದ್ಯುತ್ ಫೀಡರ್‌ಗಳು
ಶಿರಸಿ ಸ್ಟೇಷನ್‌ನಲ್ಲಿರುವ ವಿದ್ಯುತ್ ಫೀಡರ್‌ಗಳು   

ಶಿರಸಿ: ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ, ನನೆಗುದಿಗೆ ಬಿದ್ದಿದ್ದ ಕಾನಸೂರು ಮತ್ತು ಹತ್ತರಗಿ ವಿದ್ಯುತ್ ಉಪಕೇಂದ್ರ ನಿರ್ಮಾಣದ ನಿರೀಕ್ಷೆ ಮತ್ತೆ ಚಿಗುರಿದೆ.

ಅತಿವೃಷ್ಟಿ ಹಾನಿ ಸಂಬಂಧ ನಗರದಲ್ಲಿ ಇತ್ತೀಚೆಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಕಾಗೇರಿ ಅವರು ಈ ಉಪಕೇಂದ್ರ ಸ್ಥಾಪನೆಗೆ ಇರುವ ಅಡೆತಡೆ ನಿವಾರಣೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿರುವುದರಿಂದ, ಸ್ಥಳೀಯ ಜನರು ಗ್ರಿಡ್ ಆಗಬಹುದೆಂಬ ಕನಸು ಕಾಣುತ್ತಿದ್ದಾರೆ.

ಕಾನಸೂರು ಮತ್ತು ಹತ್ತರಗಿಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸಬೇಕೆಂಬ ಬೇಡಿಕೆ ಹೊಸತಲ್ಲ. ಇವೆರಡು ಉಪಕೇಂದ್ರ ನಿರ್ಮಾಣವಾದರೆ, ಶಿರಸಿ ಹಾಗೂ ಸಿದ್ದಾಪುರ ಸ್ಟೇಷನ್ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ, ಅಲ್ಲದೇ ಸುತ್ತಮುತ್ತಲಿನ ಹಳ್ಳಿಗಳಿಗೆ ಗುಣಮಟ್ಟದ ವಿದ್ಯುತ್ ದೊರೆಯುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಶಿರಸಿ ನಗರಕ್ಕೆ ನೀರು ಪೂರೈಕೆಯಾಗುವ ಮಾರಿಗದ್ದೆ ಜಾಕ್‌ವೆಲ್‌ಗೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತದೆ.

ADVERTISEMENT

ಇವೆರಡು ಪ್ರಸ್ತಾವಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿಂದ ಅರಣ್ಯ ಅನುಮತಿಗಾಗಿ ಕೇಂದ್ರ ಪರಿಸರ ಅರಣ್ಯ ಮಂತ್ರಾಲಯಕ್ಕೆ ಪ್ರಸ್ತಾವ ರವಾನೆಯಾಗಿ, ಹಲವು ತಿಂಗಳುಗಳು ಕಳೆದಿವೆ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ಪ್ರಸ್ತುತ 30 ಕಿ.ಮೀ ದೂರದ ಸಿದ್ದಾಪುರ ಸ್ಟೇಷನ್‌ನಿಂದ ಕಾನಸೂರು ಫೀಡರ್‌ಗೆ ವಿದ್ಯುತ್ ಸರಬರಾಜಾಗುತ್ತದೆ. ಇಲ್ಲಿಂದ ಕಾನಸೂರು, ಅಡಕಳ್ಳಿ, ತ್ಯಾಗಲಿ, ಗಟ್ಟೀಕೈ, ಶಿಗೇಹಳ್ಳಿ ಊರುಗಳಿಗೆ ವಿದ್ಯುತ್ ನೀಡಲಾಗುತ್ತದೆ. ಕಾನಸೂರಿಗೆ ಸಮೀಪದ ಮಾರಿಗದ್ದೆಗೆ ಶಿರಸಿ ಸ್ಟೇಷನ್‌ನಿಂದ ಸಂಪಖಂಡ ಫೀಡರ್ ಮೂಲಕ ವಿದ್ಯುತ್ ಪೂರೈಕೆಯಾಗುತ್ತದೆ. ಕಾನಸೂರಿನಲ್ಲಿ ಉಪಕೇಂದ್ರವಾದರೆ, ಮೂರು ಕಿ.ಮೀ ಅಂತರ ಮಾರಿಗದ್ದೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬಹುದು. ಹೆಚ್ಚು ಲೋಡ್ ಇರುವ ಕಾನಸೂರಿಗೆ ಗುಣಮಟ್ಟದ ವಿದ್ಯುತ್ ನೀಡಬಹುದು. ಇಲ್ಲಿಂದಲೇ ಹೇರೂರಿಗೂ ವಿದ್ಯುತ್ ಒದಗಿಸಬಹುದು.

ಹಾಗೆಯೇ ಸಂಪಖಂಡ ಫೀಡರ್‌ಗೆ ಶಿರಸಿ ಸ್ಟೇಷನ್‌ನಿಂದ ವಿದ್ಯುತ್ ನೀಡಲಾಗುತ್ತದೆ. ಈ ಫೀಡರ್‌ನಿಂದ ಸಂಪಖಂಡ, ಅಮ್ಮಿನಳ್ಲಿ, ರಾಗಿಹೊಸಳ್ಳಿ, ದೇವಿಮನೆ, ಜಾನ್ಮನೆ, ಅಜ್ಜೀಬಳ, ಕಾಗೇರಿ, ನೆಗ್ಗು ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುತ್ತದೆ. ಹತ್ತರಗಿಯಲ್ಲಿ ಉಪಕೇಂದ್ರ ನಿರ್ಮಾಣವಾದರೆ, ದೂರದ ಶಿರಸಿಯಿಂದ ವಿದ್ಯುತ್ ತರುವ ಪ್ರಮೇಯ ತಪ್ಪುತ್ತದೆ. ವಿದ್ಯುತ್ ಮಾರ್ಗ ಎಳೆಯಲು ಇಲ್ಲಿನ ರೈತರು ಬೆಟ್ಟಭೂಮಿ ಬಿಟ್ಟುಕೊಡಲು ಸಿದ್ಧರಿದ್ದಾರೆ. ಜಿಲ್ಲಾಧಿಕಾರಿ ವಿಶೇಷ ಆಸಕ್ತಿವಹಿಸಿದರೆ, ಈ ಸಮಸ್ಯೆ ಬಗೆಹರಿಸಬಹುದು. ಇವೆರಡೂ ಯೋಜನೆಗಳಿಂದ ಅರಣ್ಯಕ್ಕೆ ಹಾನಿಯಾಗುವುದಿಲ್ಲ. ಯೋಜನೆ ಪ್ರಕಾರ ಮಾರ್ಗ ಎಳೆಯುವ ಹೆಚ್ಚಿನ ಪ್ರದೇಶಗಳಲ್ಲಿ ಅಕೇಶಿಯಾ ಮರಗಳಿವೆ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.