ಶಿರಸಿ: ಸಾಂಪ್ರದಾಯಿಕ ಪಥದಲ್ಲಿ ಪ್ರತಿವರ್ಷ ಸಾಗುವ ಕಾಡಾನೆಗಳ ಪರೇಡ್ ಈ ಬಾರಿ ದಿಕ್ಕು ತಪ್ಪಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಇಷ್ಟೊತ್ತಿಗಾಗಲೇ ಮೂಲ ನೆಲೆ ತಲುಪಬೇಕಾಗಿದ್ದ ಆನೆಗಳು, ಇನ್ನೂ ಈ ಭಾಗದ ಕೃಷಿ ಭೂಮಿಯಲ್ಲಿ ದಾಂಧಲೆ ಎಬ್ಬಿಸುತ್ತಿರುವುದು ಈ ಊಹೆ ಬಲಗೊಳ್ಳಲು ಕಾರಣವಾಗಿದೆ.
ದಾಂಡೇಲಿ ಕಾಡಿನಿಂದ ಅಕ್ಟೋಬರ್‌ನಲ್ಲಿ ಬರುತ್ತಿದ್ದ ಆನೆಗಳ ಗುಂಪು ಯಲ್ಲಾಪುರ ಕಿರವತ್ತಿ ಮಾರ್ಗವಾಗಿ, ಮುಂಡಗೋಡ, ಕಾತೂರು ವಲಯದಲ್ಲಿ ಸಂಚರಿಸಿ, ಬನವಾಸಿ ಗಡಿಯವರೆಗೆ ಬಂದು ಜನೆವರಿ ವೇಳೆಗೆ ವಾಪಸ್ಸಾಗುತ್ತಿದ್ದವು. ಆದರೆ, ಈ ಬಾರಿ ಎರಡು ದೊಡ್ಡ ಆನೆ ಮತ್ತು ಎರಡು ಮರಿಯಾನೆಗಳಿರುವ ತಂಡವು, ಸಾಂಪ್ರದಾಯಿಕ ಮಾರ್ಗ ಬಿಟ್ಟು, ತಾಲ್ಲೂಕಿನ ಮಧುರವಳ್ಳಿ, ದೊಡ್ನಳ್ಳಿ, ಕುಳವೆ, ಸಿದ್ದಾಪುರ ತಾಲ್ಲೂಕಿನ ಕಾನಸೂರು ಭಾಗದ ಅಡಿಕೆ, ಬಾಳೆತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿವೆ. ಒಮ್ಮೆಯೂ ಆನೆ ಹಿಂಡಿನ ದಾಳಿ ಕಂಡಿರದ ಗ್ರಾಮಸ್ಥರು ಇದರಿಂದ ಕಂಗಾಲಾಗಿದ್ದಾರೆ.
ದಿಕ್ಕು ತಪ್ಪಿದ್ದು ಹೇಗೆ?
ಗಜಪಡೆಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುತ್ತವೆ. ಕಿರವತ್ತಿ ಮಾರ್ಗವಾಗಿ ಮುಂಡಗೋಡ ಭಾಗಕ್ಕೆ ಬರುತ್ತವೆ. ಈ ಭಾಗದಲ್ಲಿ ಅವುಗಳ ಸಂಚಾರ ಪ್ರಾರಂಭವಾಗುವ ಪೂರ್ವದಲ್ಲೇ ಇಪಿಟಿ (elephant proof trench) ಸರಿಯಾಗಿ ನಿರ್ಮಿಸಿದರೆ, ಅವು ಅಲ್ಲಿಂದಲೇ ವಾಪಸ್ಸಾಗಬಹುದು ಎನ್ನುತ್ತಾರೆ ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ.
ಸಾಮಾನ್ಯವಾಗಿ ಗಜಪಡೆಗಳು ದೊಡ್ಡ ಗುಂಪಿನಲ್ಲಿ ಬರುತ್ತವೆ. ಅದರಲ್ಲೂ ಮರಿಯಾನೆ ಇರುವಾಗ, ಸುರಕ್ಷತೆಯ ದೃಷ್ಟಿಯಿಂದ ಗುಂಪಿನಲ್ಲೇ ಇರುತ್ತವೆ. ಈ ಭಾಗದಲ್ಲಿ ಸಂಚರಿಸುತ್ತಿರುವ ನಾಲ್ಕು ಆನೆಗಳು ಗುಂಪಿನಿಂದ ಚದುರಿರುವ ಸಾಧ್ಯತೆಯಿದೆ. ಚದುರಿದ ಆನೆಗಳನ್ನು ಬಂದ ಮಾರ್ಗದಲ್ಲೇ ವಾಪಸ್ ಕಳುಹಿಸಬೇಕು. ಊರಿನಿಂದ ಹೊರ ಹಾಕುವ ಭರದಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಿಸಿದರೆ, ಸಮಸ್ಯೆ ಬಿಗಡಾಯಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
‘ಈ ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ 16–17 ಆನೆಗಳಿರುವ ತಂಡ ಸಂಚಾರಕ್ಕೆ ಬರುತ್ತಿತ್ತು. ಇಂತಹ ತಂಡಗಳು ಸಾಮಾನ್ಯವಾಗಿ ಹಿರಿಯ ಹೆಣ್ಣಾನೆಯ ಮಾರ್ಗದರ್ಶನದಲ್ಲಿ ಬರುತ್ತವೆ. ಆ ಹಿರಿಯಜ್ಜಿಗೆ ಹೊಲ, ಜಲ, ಆಹಾರ ಎಲ್ಲದರ ಅನುಭವ ಇರುತ್ತದೆ. ಹೀಗಾಗಿ ಅದು ತಂಡವನ್ನು ನಿರ್ದಿಷ್ಟ ಪಥದಲ್ಲಿ ಕೊಂಡೊಯ್ಯುತ್ತದೆ. ಹೀಗೆ ಬಂದು, ಊರಿಗೆ ಲಗ್ಗೆಯಿಟ್ಟಿದ್ದ ಹಿಂಡನ್ನು ಚದುರಿಸುವಾಗ ನಾಲ್ಕು ಆನೆಗಳು ಪ್ರತ್ಯೇಕಗೊಂಡಿರುವ ಸಾಧ್ಯತೆಯಿದೆ. ಅವುಗಳಿಗೆ ಮಾರ್ಗ ಗೊತ್ತಿಲ್ಲದೇ ಎಲ್ಲೆಲ್ಲೊ ಅಲೆದಾಡುತ್ತಿರಬಹುದು’ ಎಂದು ಅರಣ್ಯ ಕಾಲೇಜಿನ ವನ್ಯಜೀವಿ ವಿಭಾಗದ ಪ್ರಾಧ್ಯಾಪಕ ಶ್ರೀಧರ ಭಟ್ಟ ತಿಳಿಸಿದರು.
ಅರಣ್ಯ ಇಲಾಖೆಯ ವಲಯಗಳ ನಡುವೆ ಸಮನ್ವಯ ಕಲ್ಪಿಸುವ ಕೆಲಸವಾಗಬೇಕು. ಪ್ರತಿ ವಲಯದಲ್ಲೂ ಆಯಾ ವಲಯದಿಂದ ಓಡಿಸಿ, ಹೊಣೆಗಾರಿಕೆ ತಪ್ಪಿಸಿಕೊಳ್ಳುವ ಬದಲಾಗಿ, ಅಧ್ಯಯನ ನಡೆಸಿ, ಗಜಪಡೆಯ ಕುಟುಂಬಗಳನ್ನು ಕೂಡಿಸುವ ಕಾರ್ಯವಾಗಬೇಕು. ಇದರಲ್ಲಿ ಹಿರಿಯ ಅಧಿಕಾರಿಗಳ ಪಾತ್ರ ಮಹತ್ವದ್ದು ಎಂಬುದು ವನ್ಯಜೀವಿ ತಜ್ಞರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.