ADVERTISEMENT

ಕಾರವಾರ: ಎಂಡೋಸಲ್ಫಾನ್ ಬಾಧಿತ ಮಕ್ಕಳಿಗೆ ಆಶಾಕಿರಣ

ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾಹಿತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:59 IST
Last Updated 22 ಜನವರಿ 2026, 6:59 IST
ವೆಂಕಟೇಶ ನಾಯ್ಕ
ವೆಂಕಟೇಶ ನಾಯ್ಕ   

ಕಾರವಾರ: ‘ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತ 228 ಮಕ್ಕಳನ್ನು ಗುರುತಿಸಲಾಗಿದ್ದು, ಅವರಿಗೆ ಆರೋಗ್ಯ ಸೌಲಭ್ಯ ಒದಗಿಸುವ ಆಶಾಕಿರಣ ಯೋಜನೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು.

‘ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಹಲವಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯಗಳಿಂದ ವಂಚಿತರಾಗಿರುವ ದೂರುಗಳ ಹಿನ್ನೆಲೆಯಲ್ಲಿ ಬಾಧಿತರ ಮರು ಸಮೀಕ್ಷೆಗೆ ಒತ್ತಾಯಿಸಲಾಗಿತ್ತು. ಸಚಿವರ ಪ್ರಯತ್ನದಿಂದ ಕಳೆದ ವರ್ಷ ಮರು ಸಮೀಕ್ಷೆಯನ್ನು ಆರೋಗ್ಯ ಇಲಾಖೆ ಕೈಗೆತ್ತಿಕೊಂಡಿದೆ. ಈ ವೇಳೆ 543 ಬಾಧಿತ ಕುಟುಂಬಗಳು ಸೌಲಭ್ಯದಿಂದ ವಂಚಿತರಾಗಿರುವುದು ಬೆಳಕಿಗೆ ಬಂದಿದೆ. ಆ ಕುಟುಂಬಗಳ ಪೈಕಿ 132 ಬಾಲಕರು, 96 ಬಾಲಕಿಯರು ಸಂತ್ರಸ್ತರಾಗಿದ್ದು ಅರಿವಿಗೆ ಬಂದಿದೆ’ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆರೋಗ್ಯ ಇಲಾಖೆ ಹಾಗೂ ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಸಹೋಗದೊಂದಿಗೆ ಸ್ಕೊಡ್‌ವೆಸ್ ಸಂಸ್ಥೆ ಮರು ಸಮೀಕ್ಷೆಯಲ್ಲಿ ಪತ್ತೆಯಾಗಿರುವ ಮಕ್ಕಳಿಗೆ ಫಿಸಿಯೊಥೆರಪಿ ಚಿಕಿತ್ಸೆ, ಪೌಷ್ಟಿಕ ಆಹಾರ ಸೌಲಭ್ಯ ಸೇರಿದಂತೆ ಆರೋಗ್ಯ ಸೇವೆ ಒದಗಿಸಲಿದೆ. ಆಯಾ ತಾಲ್ಲೂಕಿನಲ್ಲಿ ತೆರೆದ ಕೇಂದ್ರಗಳಿಗೆ ವಾಹನದ ವ್ಯವಸ್ಥೆ ಮೂಲಕ ಬಾಧಿರನ್ನು ಕರೆತರಲಾಗುತ್ತದೆ. ಎರಡು ತಿಂಗಳುಗಳ ಕಾಲ ಈ ಸೌಲಭ್ಯ ಬಾಧಿತರಿಗೆ ಒದಗಿಸಲಾಗುತ್ತದೆ. ಬಾಧಿತರ ಪಾಲಕರಿಗೆ ಫಿಸಿಯೊಥೆರಪಿ ತರಬೇತಿ ಕೊಡಲಾಗುತ್ತದೆ’ ಎಂದರು.

ADVERTISEMENT

‘ಚಿಕಿತ್ಸೆ ಬಳಿಕ ಬಾಧಿತರಿಗೆ ಆರೋಗ್ಯ ಸುಧಾರಣೆಗೆ ಸೌಲಭ್ಯ ಒದಗಿಸಲಾಗುತ್ತದೆ. ಅಂತಹವರ ಕುಟುಂಬಕ್ಕೆ ಆರ್ಥಿಕ ಸ್ವಾವಲಂಬನೆಗೆ ಕೌಶಲ ತರಬೇತಿ ನೀಡಲಾಗುತ್ತದೆ. ಮನೆಯಲ್ಲೇ ಕುಳಿತು ಉದ್ಯಮ ಆರಂಭಿಸಲು ಅನುಕೂಲವಾಗುವಂತೆ ತರಬೇತಿ ಒದಗಿಸಲಾಗುತ್ತದೆ. ಅವರು ಉತ್ಪಾದಿಸುವ ಸರಕುಗಳಿಗೆ ಮಾರುಕಟ್ಟೆ ಕಲ್ಪಿಸಲು ಸಂಸ್ಥೆ ನೆರವಾಗಲಿದೆ’ ಎಂದರು.

ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.