ADVERTISEMENT

‘ಕ್ಲಾಸ್ 4’ ಹುದ್ದೆಗೆ ಕಾರವಾರದಲ್ಲೇ ಪರೀಕ್ಷೆ

ಸೀಬರ್ಡ್ ನೌಕಾನೆಲೆಯ ಕೆಳಹಂತದ ಉದ್ಯೋಗಗಳು: ಅಭ್ಯರ್ಥಿಗಳಿಗೆ ತಪ್ಪಿದ ಜಂಜಾಟ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 13:06 IST
Last Updated 25 ಜುಲೈ 2019, 13:06 IST
ಸೀಬರ್ಡ್ ನೌಕಾನೆಲೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಮಾತನಾಡಿದರು
ಸೀಬರ್ಡ್ ನೌಕಾನೆಲೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಮಾತನಾಡಿದರು   

ಕಾರವಾರ:‘ಸೀಬರ್ಡ್ ನೌಕಾನೆಲೆಯ ‘ಕ್ಲಾಸ್ 4’ ಹುದ್ದೆಗಳಿಗೆ ಸ್ಥಳೀಯವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ನೌಕಾಪಡೆಯ ಕೇಂದ್ರ ಕಚೇರಿಯಿಂದ ಅನುಮತಿ ಸಿಕ್ಕಿದೆ. ಲಿಖಿತವಾಗಿ ಆದೇಶ ಬಂದ ಕೂಡಲೇ ಇದನ್ನು ಜಾರಿಗೆ ತರಲಾಗುತ್ತದೆ’ ಎಂದುಕರ್ನಾಟಕ ನೌಕಾನೆಲೆ ಪ್ರದೇಶದ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ತಿಳಿಸಿದರು.

‘20ನೇ ಕಾರ್ಗಿಲ್ ವಿಜಯ ದಿವಸ’ದ ಅಂಗವಾಗಿ ನೌಕಾನೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಕೆಳಹಂತದ ಸಿಬ್ಬಂದಿ ನೇಮಕಾತಿಗೆ ಪ್ರಸ್ತುತ ಮುಂಬೈನಲ್ಲೇ ಪರೀಕ್ಷೆ ಬರೆಯಬೇಕಿದೆ. ಇದರ ಬದಲಾಗಿಕಾರವಾರದಲ್ಲೇ ಆಯೋಜಿಸುವಂತೆ ನಾವು ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಕಚೇರಿ ಸ್ವೀಕರಿಸಿದೆ’ ಎಂದರು.

ಉದ್ಯೋಗಾವಕಾಶ ಸೃಷ್ಟಿ:‘ಸೀಬರ್ಡ್ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ಬಳಿಕ ಸುಮಾರು 5 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಇದರ ಜೊತೆಗೇ ಪರೋಕ್ಷವಾಗಿ ಮತ್ತಷ್ಟು ನೌಕರಿ, ಉದ್ಯಮಗಳಿಗೆ ಅವಕಾಶ ಸೃಷ್ಟಿಯಾಗಲಿದೆ. ವಿವಿಧ ಕೆಲಸಗಳನ್ನು ಹೊರಗುತ್ತಿಗೆ ನೀಡಲಾಗುತ್ತದೆ. ನೌಕಾನೆಲೆಗೆ ಅಗತ್ಯವಿರುವ ಸಲಕರಣೆಗಳನ್ನು ಪೂರೈಕೆ ಮಾಡುವಂಥ ಹಲವು ಕೈಗಾರಿಕೆಗಳ ಸ್ಥಾಪನೆಗೂ ಇಲ್ಲಿ ಅವಕಾಶಗಳಿವೆ’ ಎಂದು ಹೇಳಿದರು.

ADVERTISEMENT

ದುರ್ವರ್ತನೆ ಸಹಿಸಲಾಗದು:‘ನಾಗರಿಕರ ಜೊತೆ ನೌಕಾನೆಲೆಯ ಕೆಲವು ಸಿಬ್ಬಂದಿ ದುರ್ವರ್ತನೆ ಮಾಡುತ್ತಾರೆ ಎಂಬ ಆರೋಪವಿದೆ’ ಎಂದು ಪತ್ರಕರ್ತರು ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ ಸಿಂಗ್, ‘ಸಮವಸ್ತ್ರ ಧರಿಸಿದ ವ್ಯಕ್ತಿ ತಪ್ಪು ಕೆಲಸ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾಗರಿಕ ಜೊತೆ ಬೇಜವಾಬ್ದಾರಿಯಿಂದ ವರ್ತಿಸುವುದು ಖಂಡಿತಾ ಸ್ವೀಕಾರಾರ್ಹವಲ್ಲ. ಅವರ ವಿರುದ್ಧ ಆರೋಪ ಸಾಬೀತಾದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.’ ಎಂದು ಭರವಸೆ ನೀಡಿದರು.

ನೌಕಾನೆಲೆಯಲ್ಲಿ ಆಗಾಗ ಒಳನುಸುಳುವಿಕೆಯ ಪ್ರಕರಣಗಳು ವರದಿಯಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ದೊಡ್ಡ ನೌಕಾನೆಲೆ. ಇದರ ಹೊರವಲಯದಲ್ಲಿ ಒಳನುಸುಳುವ ಪ್ರಯತ್ನವಾಗಿದೆ. ಕೆಲವರುಭದ್ರತಾ ವ್ಯವಸ್ಥೆಯ ಮಾಹಿತಿಯಿಲ್ಲದೇ ಒಳಬರುತ್ತಿದ್ದಾರೆ. ಒಳನುಸುಳಿದವರನ್ನು ತಕ್ಷಣ ಪತ್ತೆ ಹಚ್ಚಲಾಗುತ್ತಿದೆ. ಎರಡನೇ ಹಂತದ ಕಾಮಗಾರಿ‍ಪೂರ್ಣಗೊಂಡ ಬಳಿಕ ಇದು ಸಂಪೂರ್ಣವಾಗಿ ನಿಲ್ಲಲಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯಾರ್ಡ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ಎ.ಪಿ.ಕುಲಕರ್ಣಿ, ಯೋಜನೆ ಜಾರಿಯ ಉಪ ಮಹಾ ನಿರ್ದೇಶಕ ಕ್ಯಾಪ್ಟನ್ ಎ.ಕಿರಣಕುಮಾರ್ ರೆಡ್ಡಿ, ಸಿಬ್ಬಂದಿ ಮುಖ್ಯಾಧಿಕಾರಿ ಕ್ಯಾಪ್ಟನ್ ಕೆ.ಪಿ.ಸ್ರೀಸನ್, ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾಪ್ಟನ್ ಅಜಯ್ ಕಪೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.