ಕಾರವಾರ: ಗೋವಾ ರಾಜ್ಯದಲ್ಲಿ ಕಡಿಮೆ ಬೆಲೆಗೆ ದೊರೆಯುವ ಮದ್ಯವನ್ನು ಸಮುದ್ರ ಮಾರ್ಗವಾಗಿ ಅಕ್ರಮವಾಗಿ ತರುವುದಕ್ಕೆ ತಡೆ ಹಾಕಲು ಅಬಕಾರಿ ಇಲಾಖೆಯಲ್ಲಿದ್ದ ‘ಸಮುದ್ರ ದಳ’ (ಡಿಂಗಿ ದಳ) ಬಲ ಕಳೆದುಕೊಂಡಿದೆ. ಇದರಿಂದ ಸಮುದ್ರ ಮಾರ್ಗವಾಗಿ ಮದ್ಯ ಸಾಗಣೆ ಮಾಡುವವರಿಗೆ ಅನುಕೂಲವಾಗಿದೆ ಎಂಬ ಆರೋಪ ಹೆಚ್ಚಿದೆ.
ಮಳೆಗಾಲದ ಅವಧಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗದಲ್ಲಿ ಅಕ್ರಮ ಮದ್ಯ ಸಾಗಣೆ ಕಷ್ಟ. ಈ ಅವಧಿಯ ಹೊರತಾಗಿ ಉಳಿದ ಸಮಯದಲ್ಲಿ ಮೀನುಗಾರಿಕೆ ದೋಣಿಗಳನ್ನು ಬಳಸಿ ಗೋವಾದಿಂದ ಅಕ್ರಮವಾಗಿ ಮದ್ರ ದಾಸ್ತಾನು ತಂದು ಜಿಲ್ಲೆಯ ವಿವಿಧೆಡೆ ಸರಬರಾಜು ಮಾಡುವ ಜಾಲ ಸಕ್ರೀಯವಾಗಿದೆ ಎಂಬ ದೂರುಗಳಿವೆ.
ಜಿಲ್ಲೆಗೆ ಹೊಂದಿಕೊಂಡೇ ಗೋವಾ ರಾಜ್ಯದ ಗಡಿ ಪ್ರದೇಶವಿದೆ. ಗೋವಾದ ಪೊಳೆಮ್, ಗಾಲ್ಜಿಬಾಗ, ಪಾಲೊಲೆಮ್ ಸೇರಿದಂತೆ ವಿವಿಧೆಡೆಯ ಕಡಲತೀರ ಪ್ರದೇಶಗಳಿಂದ ಗೋವಾ ಮದ್ಯಗಳನ್ನು ದೋಣಿಗಳ ಮೂಲಕ ತಂದು ಕಾರವಾರದಿಂದ ಭಟ್ಕಳವರೆಗೆ ವಿವಿಧೆಡೆ ಪೂರೈಕೆ ಮಾಡುತ್ತಿರುವ ದೂರುಗಳಿವೆ. ಆಗಾಗ ಅಬಕಾರಿ ತಂಡ ಕಡಲತೀರದ ಗ್ರಾಮಗಳಲ್ಲಿ ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆಯುವ ಘಟನೆಗಳು ನಡೆಯುತ್ತಿರುತ್ತವೆ.
‘ಜಿಲ್ಲೆಯು 160 ಕಿ.ಮೀ ಉದ್ದದ ಕಡಲತೀರ ವ್ಯಾಪ್ತಿ ಹೊಂದಿದೆ. ಇಷ್ಟೊಂದು ವಿಶಾಲ ಪ್ರದೇಶದಲ್ಲಿ ನಿಗಾ ಇಡುವುದು ಸವಾಲಿನ ಕೆಲಸ. ಈ ಹಿಂದೆ ಸಮುದ್ರ ದಳಕ್ಕೆ ಪ್ರತ್ಯೇಕ ಸಿಬ್ಬಂದಿ ನೀಡಲಾಗುತ್ತಿತ್ತು. ದೋಣಿ ಸೇರಿದಂತೆ ಯಾವ ಸೌಕರ್ಯ ಇರದಿದ್ದರೂ ಸಮುದ್ರ ದಳದ ಸಿಬ್ಬಂದಿ ಕರಾವಳಿ ಕಾವಲು ಪಡೆ ಇಲ್ಲವೇ ತಟರಕ್ಷಕ ಪಡೆಯ ನೆರವಿನೊಂದಿಗೆ ಸಮುದ್ರ ಮಾರ್ಗದಲ್ಲೇ ಗಸ್ತು ನಡೆಸುತ್ತಿದ್ದರು. ಕೆಲ ವರ್ಷಗಳಿಂದ ಸಿಬ್ಬಂದಿ ಕೊರತೆ ಕಾರಣದಿಂದ ಸಮುದ್ರ ದಳ ಸ್ಥಗಿತಗೊಂಡಿದೆ. ಕಚೇರಿ ಇದ್ದರೂ ಸಿಬ್ಬಂದಿ, ದೋಣಿ, ಇನ್ನಿತರ ಸುರಕ್ಷತಾ ಸೌಕರ್ಯ ಇಲ್ಲದ ಕಾರಣದಿಂದ ಈ ವಿಭಾಗವು ಕೆಲಸ ಸ್ಥಗಿತಗೊಳಿಸಿದೆ’ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಸಮುದ್ರ ದಳಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಗೋವಾಕ್ಕೆ ಹೊಂದಿಕೊಂಡಿರುವ ಕಾರಣಕ್ಕೆ ಕಾರವಾರದ ಕಡಲತೀರ ಭಾಗದಲ್ಲಿ ಮದ್ಯ ಸಾಗಣೆ ನಡೆಯದಂತೆ ಕರಾವಳಿ ಕಾವಲು ಪಡೆ ತಂಡದೊಂದಿಗೆ ಆಗಾಗ ಗಸ್ತು ನಡೆಸಲಾಗುತ್ತಿದೆ’ ಎಂದು ಅಬಕಾರಿ ಡಿಎಸ್‌ಪಿ ರಮೇಶ ಭಜಂತ್ರಿ ಪ್ರತಿಕ್ರಿಯಿಸಿದರು.
ಗೋವಾದಿಂದ ಮದ್ಯ ಸಾಗಣೆ ನಡೆಯದಂತೆ ಸಮುದ್ರ ಅರಣ್ಯ ಮಾರ್ಗ ಮತ್ತು ಹೆದ್ದಾರಿಯ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಬಿಗುಗೊಳಿಸಲು ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆಅಮಾನುಲ್ಲಾ ಖಾನ್ ಅಬಕಾರಿ ಉಪ ಆಯುಕ್ತ
ನಸುಕಿನ ಜಾವ ಪೂರೈಕೆ ಹೆಚ್ಚು ‘ಸಮುದ್ರ ತೀರದಲ್ಲಿ ಅಬಕಾರಿ ಪೊಲೀಸ್ ಇಲಾಖೆ ಹಗಲು ಅಥವಾ ಇಳಿಸಂಜೆಯ ಹೊತ್ತು ಗಸ್ತು ನಡೆಸುವುದು ಹೆಚ್ಚು. ಆದರೆ ಗೋವಾದಿಂದ ಅಕ್ರಮವಾಗಿ ದೋಣಿಗಳ ಮೂಲಕ ಮದ್ಯ ದಾಸ್ತಾನು ತಂದು ನಸುಕಿನ ಜಾವ ಇಳಿಸಲಾಗುತ್ತದೆ. ಅಲ್ಲಿಂದ ಬೇರೆ ಬೇರೆ ಸ್ಥಳಗಳಿಗೆ ಪೂರೈಕೆ ನಡೆಯುತ್ತದೆ. ಮಳೆಗಾಲ ಮುಗಿದ ಬಳಿಕ ಈ ಚಟುವಟಿಕೆ ನಡೆಸುವ ತಂಡಗಳು ಸಕ್ರೀಯರಾಗುತ್ತವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಮೀನುಗಾರ ಮುಖಂಡರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.