ADVERTISEMENT

ಭೂಕುಸಿತ: ತುರ್ತು ಮುನ್ನೆಚ್ಚರಿಕೆ ಕ್ರಮಕ್ಕೆ ಶಿಫಾರಸು

ಕ್ಷೇತ್ರ ಅಧ್ಯಯನ ನಡೆಸಿದ ತಜ್ಞರ ತಂಡ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 12:00 IST
Last Updated 17 ಜೂನ್ 2020, 12:00 IST

ಶಿರಸಿ: ಮಲೆನಾಡಿನ ಭೂ ಕುಸಿತ ಕುರಿತ ಅಧ್ಯಯನ ಸಮಿತಿಯು ಮಲೆನಾಡಿನ ಕೆಲವು ಜಿಲ್ಲೆಗಳ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ಸಂಬಂಧ ತುರ್ತು ಕ್ರಮಕ್ಕೆ ಈ ಸಮಿತಿ ಶಿಫಾರಸು ಮಾಡಿದೆ.

ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ತಜ್ಞರ ಸಮಿತಿ ಅಧ್ಯಕ್ಷರೂ ಆಗಿರುವ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ನೇತೃತ್ವದ ತಂಡವು ತುರ್ತು ಶಿಫಾರಸುಗಳನ್ನು ತಿಳಿಸಿದೆ.

ಚಿಕ್ಕಮಗಳೂರು-ಕೊಡಗು ಜಿಲ್ಲೆಗಳು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಭೂಕುಸಿತ ಆಗಬಹುದಾದ ಸೂಕ್ಷ್ಮ ಪ್ರದೇಶಗಳನ್ನು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಗುರುತಿಸಿದ್ದಾರೆ. 2020ರ ಜೂನ್, ಜುಲೈ, ಅಗಸ್ಟ್ ತಿಂಗಳುಗಳ ಮಳೆಗಾಲದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಈಗಾಗಲೇ ಭೂಕುಸಿತ ಆಗಿರುವ ಪ್ರದೇಶಗಳಲ್ಲಿ ಹಾಗೂ ವಿಜ್ಞಾನಿಗಳು ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಗುಡ್ಡ-ಬೆಟ್ಟಗಳಲ್ಲಿ ಭೂ ಕುಸಿತವಾದರೆ, ಕೆಳಭಾಗದಲ್ಲಿ ಬೆಟ್ಟದ ಮಧ್ಯೆ ವಾಸಿಸುವ, ವನವಾಸಿಗಳು, ರೈತರು ಪ್ರಾಣ ಕಳೆದುಕೊಳ್ಳಬಹುದು ಎಂದು ಅಶೀಸರ ವಿವರಿಸಿದರು.

ADVERTISEMENT

ಸಂಭಾವ್ಯ ಭೂ ಕುಸಿತ ಪ್ರದೇಶಗಳಲ್ಲಿ ವಿಕೋಪ ಪರಿಹಾರ, ಪುನರ್ವಸತಿ, ಪೂರ್ವಭಾವಿ ಸಿದ್ಧತೆ ಆಗಬೇಕು. ಮಳೆ ಸಂದರ್ಭದಲ್ಲಿ ವನವಾಸಿಗಳು, ರೈತ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವ ಬಗ್ಗೆ ತಿಳಿಸುವ ತುರ್ತು ಕ್ರಮ ಆಗಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಗೃತಿ ಸಭೆ ನಡೆಸಬೇಕು. ಸ್ಥಳೀಯ ಜನರನ್ನು ತಾತ್ಕಾಲಿಕವಾಗಿ ತೆರವುಗೊಳಿಸಲೇಬೇಕಾದ ಸಂದರ್ಭ ಇದೆ ಎಂದು ಶಿಫಾರಸಿನಲ್ಲಿ ವಿವರಿಸಲಾಗಿದೆ.

ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಕಾರ್ಯಾಚರಣೆಗೆ ತುರ್ತು ಮಾರ್ಗಸೂಚಿ ಕಳುಹಿಸಬೇಕು. ಸ್ಥಳೀಯರನ್ನು ತೆರವುಗೊಳಿಸಲು ಕಂದಾಯ, ಅರಣ್ಯ, ಪಂಚಾಯತ್‌ರಾಜ್ ಇಲಾಖೆಗಳ ಸಮನ್ವಯ, ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ತಜ್ಞರ ಸಮಿತಿ ಮನವಿ ಮಾಡಿದೆ.

ಡಾ.ಶ್ರೀನಿವಾಸ ರೆಡ್ಡಿ, ಡಾ.ಟಿ.ವಿ.ರಾಮಚಂದ್ರ, ಡಾ.ಮಾರುತಿ, ಡಾ.ಕೇಶವ ಕೊರ್ಸೆ, ಅರಣ್ಯ, ಪರಿಸರ, ಗಣಿ ಭೂ ವಿಜ್ಞಾನ, ಮಾಲಿನ್ಯ ನಿಯಂತ್ರಣ ಇಲಾಖೆಗಳ ಉನ್ನತ ಅಧಿಕಾರಿಗಳು ತಂಡವು ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭೂ ಕುಸಿತ ಪ್ರದೇಶ, ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿ ಪ್ರದೇಶಕ್ಕೆ ಭೇಟಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.