ADVERTISEMENT

ನಕಲಿ ದಾಖಲೆ ನೀಡಿ ವಿವಾಹ ನೋಂದಣಿ: ಬಂದೇನವಾಜ್‌ಗೆ ಶಿಕ್ಷೆ ನೀಡಲು ಮುತಾಲಿಕ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:56 IST
Last Updated 31 ಅಕ್ಟೋಬರ್ 2025, 5:56 IST
ಪ್ರಮೋದ ಮುತಾಲಿಕ್
ಪ್ರಮೋದ ಮುತಾಲಿಕ್   

ಶಿರಸಿ: ನಕಲಿ ದಾಖಲೆ ನೀಡುವ ಮೂಲಕ ಮುಂಡಗೋಡದ ವಿವಾಹ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ವಾಜಾ ಬಂದೇನವಾಜ್ (ಮುಕೇಳೆಪ್ಪ) ಹಿಂದೂ ಯುವತಿಯನ್ನು ಮದುವೆಯಾಗಿದ್ದು, ತಪ್ಪಿತಸ್ಥ ಬಂದೇನವಾಜ್‌ ಹಾಗೂ ಸಹಕರಿಸಿದ ಅಧಿಕಾರಿಗೆ ಶಿಕ್ಷೆಯಾಗಬೇಕೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ನಗರದ ನೆಮ್ಮದಿ ಕುಟೀರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯೂಟ್ಯೂಬರ್ ಕ್ವಾಜಾ ಬಂದೇನವಾಜ್ ಸುಳ್ಳು ದಾಖಲೆಗಳನ್ನು ನೀಡಿ ಮದುವೆಯಾಗಿ ಒಂದು ತಿಂಗಳಾದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಬಾಡಿಗೆ ಮನೆಯಲ್ಲಿ ಇದ್ದೇನೆ, ಕಲ್ಯಾಣ ಮಂಟಪದಲ್ಲಿ ಮದುವೆ ಆಗಿದ್ದೇನೆ ಎಂದು ಹೇಳಿದ್ದಾನೆ. ಅಲ್ಲಿ ಮದುವೆಯೇ ಆಗಿಲ್ಲ. ಬಾಡಿಗೆ ಮನೆಯಲ್ಲಿಯೂ ವಾಸವಾಗಿಲ್ಲ. ಇದನ್ನು ವಿರೋಧಿಸಿ ಪ್ರತಿಭಟಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮನವಿ ಸಲ್ಲಿಸಿದರೂ ಸಂಬಂಧಿಸಿದವರು ಕ್ರಮ ತೆಗೆದುಕೊಂಡಿಲ್ಲ’ ಎಂದರು.

‘ಅಫಿಡವಿಟ್‌ನಲ್ಲಿ ಎಲ್ಲ ಸುಳ್ಳು ದಾಖಲೆಗಳು ಇವೆ. ಅವನನ್ನು ಬಚಾವ್ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಸಚಿವ ಜಮೀರ್ ಅಹಮ್ಮದ್ ಒತ್ತಡವಿದೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದರು. 

ADVERTISEMENT

‘ಯುವತಿಯ ತಾಯಿ ದೂರು ನೀಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆ ಭ್ರಷ್ಟವಾಗಿದೆ. ಸುಳ್ಳು ದಾಖಲೆಪತ್ರಗಳನ್ನು ನೀಡಿ ಸರ್ಕಾರಕ್ಕೆ ಮೋಸ ಮಾಡಿರುವ ಮುಕಳೆಪ್ಪನನ್ನು ಕೂಡಲೇ ಬಂಧಿಸಬೇಕು. ಮುಂಡಗೋಡ ಉಪ ನೋಂದಣಿಯಲ್ಲಿ ಭ್ರಷ್ಟ ಅಧಿಕಾರಿಯಿದ್ದು, ಮದುವೆ ರದ್ಧಾಗಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಜಾಗದಲ್ಲಿ, ಸರ್ಕಾರಿ ಕಟ್ಟದಲ್ಲಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆ ಮಾಡಬಾರದು ಎಂದು ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೊರ್ಟ್ ಅವಕಾಶ ಕಲ್ಪಿಸಿ ತೀರ್ಪು ನೀಡಿರುವುದನ್ನು ಸ್ವಾಗತಿಸುತ್ತೇವೆ. 100 ನೇ ವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಆರ್‌ಎಸ್ಎಸ್ ರಾಜಕೀಯೇತರ ಸೇವಾ ಸಂಸ್ಥೆಯಾಗಿ ದೇಶದಲ್ಲಿ ಹೆಮ್ಮರವಾಗಿ ಬೆಳೆದಿದೆ. ಒಂದೇ ವಿಚಾರಧಾರೆಯಲ್ಲಿ ಜನಬೆಂಬಲ, ಜನಮನ್ನಣೆ ಗಳಿಸಿದೆ. ಶಿಸ್ತು, ಶಾಂತಿ, ದೇಶಭಕ್ತಿಯನ್ನು ಆರ್‌ಎಸ್ಎಸ್ ಕಲಿಸುತ್ತಿದೆ’ ಎಂದರು.

ಶ್ರೀರಾಮ ಸೇನೆಯ ಪ್ರಮುಖರಾದ ಬಸವರಾಜ ಗೌಡರ, ಮಂಜು ಕಾಟ್ಕರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.