ADVERTISEMENT

ಸಂಘಟನೆಯ ಚಾಕಚಕ್ಯತೆಯಿಂದ ಸಂಸ್ಥೆ ಸದೃಢ: ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 4 ಮೇ 2022, 3:02 IST
Last Updated 4 ಮೇ 2022, 3:02 IST
ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.   

ಶಿರಸಿ: ಯೋಗ್ಯರಿಗೆ ದೊರೆತರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ. ಇದಕ್ಕೆ ಶಂಭುಲಿಂಗ ಹೆಗಡೆ ಅವರಿಗೆ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ನಿದರ್ಶನ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಶಂಭುಲಿಂಗ ಹೆಗಡೆ ನಡಗೋಡ ಅವರಿಗೆ ಆಯೋಜಿಸಲಾಗಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಘಟನೆಯನ್ನು ತಳಮಟ್ಟದಿಂದ ಕಟ್ಟುವ ಚಾಕಚಕ್ಯತೆ ಹೊಂದಿರುವ ಕಾರಣಕ್ಕೆ ಸಹಕಾರ ಸಂಸ್ಥೆಯನ್ನೂ ಅವರು ಬಲಪಡಿಸಿದ್ದಾರೆ. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ವಿಶ್ವಾಸ ಮೂಡಿಸುವ ಕೆಲಸವನ್ನು ಕದಂಬ ಸಂಸ್ಥೆ ಮಾಡುತ್ತಿದೆ’ ಎಂದರು.

ಅಡಿಕೆ ಮಹಾಮಂಡಳದ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜಪ್ಪ ಮಾತನಾಡಿ, ‘ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ನಿಷ್ಪಕ್ಷಪಾತನಕ್ಕೆ ಮಾತ್ರ ಬೆಲೆ ಇದೆ. ಅಂತಹ ಗುಣವಿದ್ದವರು ಇದ್ದರೆ ಮಾತ್ರ ಸಹಕಾರ ಕ್ಷೇತ್ರ ಬಲಗೊಳ್ಳುತ್ತದೆ’ ಎಂದರು.

ADVERTISEMENT

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಂಭುಲಿಂಗ ಹೆಗಡೆ ನಡಗೋಡ, ‘ರೈತರಿಗೆ ನ್ಯಾಯಸಮ್ಮತ ಸೇವೆ ಒದಗಿಸಿರುವುದು ಪರಿಗಣನೆಗೆ ಬಂದಿರುವುದಕ್ಕೆ ಸಮಾಧಾನವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿಯ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ ಮಾತನಾಡಿ, ‘ಸಹಕಾರ ಕ್ಷೇತ್ರದೊಂದಿಗೆ ಜನರ ಜೀವನ ಬೆಸೆದುಕೊಂಡಿದೆ. ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕಾದ ಅಗತ್ಯವಿದೆ’ ಎಂದರು.

ಸಹಕಾರ ಪ್ರಮುಖ ಭಾಸ್ಕರ ಹೆಗಡೆ ಕಾಗೇರಿ ಅಭಿನಂದನಾ ಮಾತುಗಳನ್ನಾಡಿದರು. ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ್, ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಸಲಹಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಮೋಹನದಾಸ ನಾಯಕ, ಶ್ರೀಪಾದ ಹೆಗಡೆ ದೊಡ್ನಳ್ಳಿ ಇದ್ದರು.

ಕದಂಬ ಮಾರ್ಕೆಟಿಂಗ್ ಉಪಾಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ ಸ್ವಾಗತಿಸಿದರು. ನರೇಂದ್ರ ಹೊಂಡಗಾಶಿಗೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.