ADVERTISEMENT

ಮೆಕ್ಕೆಜೋಳ ಖರೀದಿಗೆ ಮಧ್ಯವರ್ತಿ ಕಾಟ

ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ಖರೀದಿಗೆ ಕೇಂದ್ರ ಆರಂಭಿಸಲು ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 14:15 IST
Last Updated 2 ಡಿಸೆಂಬರ್ 2021, 14:15 IST
ಮೆಕ್ಕೆಜೋಳ ಫಸಲಿಗೆ ಹಾನಿಯಾಗಿರುವುದು (ಸಾಂದರ್ಭಿಕ ಚಿತ್ರ)
ಮೆಕ್ಕೆಜೋಳ ಫಸಲಿಗೆ ಹಾನಿಯಾಗಿರುವುದು (ಸಾಂದರ್ಭಿಕ ಚಿತ್ರ)   

ಕಾರವಾರ: ಒಂದೆಡೆ ಅಕಾಲಿಕ ಮಳೆಯ ರಗಳೆ. ಮತ್ತೊಂದೆಡೆ ಮಧ್ಯವರ್ತಿಗಳ ಕಾಟ. ಇದರ ನಡುವೆಯೂ ಕೇಂದ್ರ ಸರ್ಕಾರದವು ಘೋಷಿಸಿದ ಬೆಂಬಲ ಬೆಲೆ ಕೈಗೆ ಸಿಗಲು ಖರೀದಿ ಕೇಂದ್ರವಿಲ್ಲದ ಕೊರಗು.

ಇದು ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದವರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ. ಹಳಿಯಾಳ, ಮುಂಡಗೋಡ, ಶಿರಸಿ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಸರ್ಕಾರವು ಈ ಬಾರಿ ಪ್ರತಿ ಕ್ವಿಂಟಲ್‌ ಫಸಲಿಗೆ ₹ 1,780 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಜಿಲ್ಲೆಯಲ್ಲಿ ಖರೀದಿ ಕೇಂದ್ರವೇ ಇಲ್ಲ. ಇದರ ದುರ್ಲಾಭ ಪಡೆಯುತ್ತಿರುವ ಮಧ್ಯವರ್ತಿಗಳು, ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ ಎಂಬುದು ರೈತರ ಅಳಲು.

ಒಂದು ತಿಂಗಳಿನಿಂದ ಆಗಾಗಾ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮೆಕ್ಕೆಜೋಳದ ಕಟಾವಿಗೆ ಅಡ್ಡಿಯಾಗಿದೆ. ಬಿಸಿಲು ಕಾಣಿಸಿದ ದಿನ ಕೊಯ್ಲು ಮಾಡಿದ್ದವರಿಗೂ ಒಣಗಿಸಲು ಮೋಡ ಕವಿದ ವಾತಾವರಣ ಸಮಸ್ಯೆ ತಂದಿದೆ. ಅಲ್ಲದೇ ಮಳೆಯೂ ಸುರಿದು ಫಸಲು ಹಾಳಾಗಿದೆ. ಇಂಥ ಸಂದರ್ಭದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರದ ಅವಶ್ಯಕತೆಯಿತ್ತು ಎನ್ನುವುದು ರೈತರ ಆಶಯವಾಗಿದೆ.

ADVERTISEMENT

‘ಸಾರ್ವಜನಿಕರಿಗೆ ಪಡಿತರ ಸಾಮಗ್ರಿಯಲ್ಲಿ ವಿತರಿಸುವ ಧಾನ್ಯಗಳನ್ನು ಖರೀದಿ ಕೇಂದ್ರಗಳ ಮೂಲಕ ಪಡೆಯಲಾಗುತ್ತದೆ. ಆದರೆ, ಮೆಕ್ಕೆಜೋಳವನ್ನು ಪಡಿತರದಲ್ಲಿ ವಿತರಿಸುವುದಿಲ್ಲ. ಆದ್ದರಿಂದ ಅದನ್ನು ಆಹಾರ ಉತ್ಪನ್ನವೆಂದು ಖರೀದಿಸುವುದಿಲ್ಲ. ಇದು ಖರೀದಿ ಕೇಂದ್ರ ಆರಂಭಿಸಲು ಇರುವ ಸಮಸ್ಯೆಯಾಗಿದೆ. ಇದರ ಹೊರತಾಗಿಯೂ ಕೇಂದ್ರ ಆರಂಭಿಸಲು ಬೇಕಾದಷ್ಟು ಪ್ರಮಾಣದಲ್ಲಿ ಉತ್ತರ ಕನ್ನಡದಲ್ಲಿ ಮೆಕ್ಕೆಜೋಳವನ್ನು ಬೆಳೆಯುತ್ತಿಲ್ಲ. ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 39,875 ಟನ್ ಬೆಳೆಯಿದೆ’ ಎನ್ನುತ್ತಾರೆ ಅಧಿಕಾರಿಗಳು.

‘ರೈತರಿಗೆ ಬಹಳ ನಷ್ಟ’:

‘ಮೆಕ್ಕೆಜೋಳ ಬೆಳೆಯಲು ಬಹಳ ಶ್ರಮ ಬೇಕಾಗುತ್ತಿದೆ. ಆದರೆ, ಸರ್ಕಾರವು ನಿಗದಿ ಮಾಡಿದ ಕನಿಷ್ಠ ಖರೀದಿ ದರವು ಜಿಲ್ಲೆಗೆ ಅನ್ವಯಿಸುವುದೇ ಇಲ್ಲ. ಅದಕ್ಕಿಂತ ನೂರಾರು ರೂಪಾಯಿ ಕಡಿಮೆ ದರಕ್ಕೆ ಮಧ್ಯವರ್ತಿಗಳು ಖರೀದಿಸುತ್ತಾರೆ. ಇದರಿಂದ ರೈತರಿಗೆ ಬಹಳ ನಷ್ಟವಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಖರೀದಿ ಕೇಂದ್ರ ತೆರೆದು ಅನುಕೂಲ ಮಾಡಿಕೊಡಬೇಕು’ ಎಂದು ಹಳಿಯಾಳದ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಪ್ಪಾರಾವ್ ಕೃಷ್ಣಾ ಪೂಜಾರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.