ADVERTISEMENT

‘ಅಪ್ಪ ಬಿಡಿಯಾಗಿ ಕಾಣಸಿಗುವ ಅಚ್ಚರಿ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 15:48 IST
Last Updated 15 ಜೂನ್ 2019, 15:48 IST
ಅಪ್ಪ ಡಾ.ಶ್ರೀಪಾದ ಭಟ್ ಜೊತೆಯಲ್ಲಿ ಕೆನಡಾದಲ್ಲಿ ಅಧ್ಯಯನ ಮಾಡುತ್ತಿರುವ ಶೀತಲ್ ಭಟ್
ಅಪ್ಪ ಡಾ.ಶ್ರೀಪಾದ ಭಟ್ ಜೊತೆಯಲ್ಲಿ ಕೆನಡಾದಲ್ಲಿ ಅಧ್ಯಯನ ಮಾಡುತ್ತಿರುವ ಶೀತಲ್ ಭಟ್   

ಶಿರಸಿ: ಅಪ್ಪ ನನ್ನ ನಾಟಕದ ಮೇಷ್ಟ್ರು ಮತ್ತು ಬಿಡಿಬಿಡಿಯಾಗಿ ಮಾತ್ರ ಕಾಣಸಿಗುವ ಅಚ್ಚರಿ. ಹಾಗಾಗಿ ನಾನು ಅಪ್ಪನ ಬಗ್ಗೆ ಹಾಗೆ ಬಿಡಿ ಬಿಡಿಯಾಗಿ ಮಾತ್ರ ಬರೆಯಬಲ್ಲೆ.

ಬಾಲ್ಯದ ಮೊದಲ ಕೆಲ ವರ್ಷಗಳಲ್ಲಿ ಅಪ್ಪ ಅಂದರೆ ತುಂಬ ನಗುವಿನ, ದೊಡ್ಡ ಹೊಟ್ಟೆಯ ನಾಟಕದ ಮನುಷ್ಯ ಎಂದೇ ನೆನಪು. ಆಗ ನಾನಿನ್ನೂ ಚಿಕ್ಕವಳು, ಕುಮಟಾದಲ್ಲಿ ನಡೆಸುತ್ತಿದ್ದ ಬೇಸಿಗೆ ಶಿಬಿರಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ನನ್ನ ನಾಟಕ ಪ್ರೀತಿ ಶುರುವಾಗಿದ್ದು ಅಲ್ಲಿ. ಶಿಬಿರದ ಮೊದಲ ದಿನ ಇರಬೇಕು. ಪುಟ್ಟ ಹುಡುಗಿಯೊಬ್ಬಳು ‘ಶಿಬಿರದಲ್ಲಿ ಏನು ಬೇಕಾದರೂ ಮಾಡಿಸಿ, ಆದರೆ ನೀತಿಕತೆಗಳನ್ನು ಮಾತ್ರ ಹೇಳ್ಬೇಡಿ’ ಅಂದಳು. ‘ನಾವಿನ್ನು ನೀತಿ ಇಲ್ಲದ ಕತೆಗಳನ್ನು ಮಾತ್ರ ಹೇಳೋಣ ಮತ್ತೆ ನೀತಿ ಇಲ್ಲದ ಕತೆಗಳ ನಾಟಕ ಮಾಡೋಣ’ ಅಂತ ಗಲ್ಲ ಕಣ್ಣುಗಳಲ್ಲೂ ನಗೆ ತುಳುಕಿಸುತ್ತಾ ಹೇಳಿದ.ಆಗ ಅಪ್ಪ ನನಗೆ ಬುದ್ಧನಂತೆ ಕಂಡಿದ್ದ. ನನ್ನ ನೆನಪಿನಲ್ಲಿರುವ ಅಪ್ಪನ ಮೊದಲ ಚಿತ್ರ ಇದು.

ಇನ್ನೊಂದು ಬಿಡಿ ನೆನಪು. ನಾನಾಗ ಎಸ್ಸೆಸ್ಸೆಲ್ಸಿ. ಎಲ್ಲರೂ ಪರೀಕ್ಷೆ ತಯಾರಿಯಲ್ಲಿದ್ದರೆ ನಾನು ಶೇಷಗಿರಿಯಲ್ಲಿ ನಡೆಯುತ್ತಿದ್ದ ‘ಉಷಾಹರಣ’ ನಾಟಕದ ರಿಹರ್ಸಲ್‌ಗೆ ಹೋಗುತ್ತಿದೆ. 1930ರ ನಾಟಕದ ಜಾದೂಗಾರ್ತಿ ಚಿತ್ರಲೇಖಾನ ಪಾತ್ರವನ್ನು ಕಲಿಯುತ್ತಿದ್ದೆ. ಊರ ಮಧ್ಯದ ಚಿಕ್ಕ ವೇದಿಕೆ ಮೇಲೆ ನಮ್ಮ ರಿಹರ್ಸಲ್. ಆ ಹೊತ್ತಿಗೆ ಊರಿನವರೆಲ್ಲ ಕೆಲಸ ಮುಗಿಸಿ ರಿಹರ್ಸಲ್ ನೋಡಲಿಕ್ಕೆ ಸೇರುತ್ತಿದ್ದರು. ನಟರಷ್ಟೇ ಇದ್ದು ನಾಟಕ ಮಾಡಿದರೆ ಚೆನ್ನಾಗಿರುತ್ತೆ ಎಂದು ನಾನು ಕಸಿವಿಸಿಪಡುತ್ತಿದ್ದೆ. ಆದರೆ ಹಲವು ವರ್ಷಗಳ ನಂತರ ಅರ್ಥವಾಗಲು ಶುರವಾಯ್ತು, ಅವನಿಗೆ ನಾಟಕ ಪ್ರದರ್ಶನಕ್ಕಿಂತ , ನಾಟಕ ಕಟ್ಟುವ ಪ್ರಕ್ರಿಯೆ ಮುಖ್ಯ ಎಂದು. ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅವನು ಸಂಬಂಧ ಕಟ್ಟುವ ಪ್ರಕ್ರಿಯೆಯನ್ನು ಹುಡುಕೋದು. ನಾಟಕ ಹೆಚ್ಚು ಸಾಂಸ್ಥೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ, ಅಪ್ಪ ನಾಟಕವನ್ನು ಸಮುದಾಯದ ಸಹಜ ಕ್ರಿಯೆಯಾಗಿಸುವ ಕೆಲಸ ಮಾಡುತ್ತಾನೆ. ಚಂದದ ನಾಟಕ ಮಾಡುವುದಕ್ಕಿಂತ ಹೆಚ್ಚಾಗಿ, ನಾಟಕದ ಆಸಕ್ತಿ ಬೆಳೆಸಲು, ಹಲವು ಓದಿನ ಸಾಧ್ಯತೆ, ಓದುವ ಕ್ರಿಯೆಯ ಬೇರೆ ಬೇರೆ ಸ್ವರೂಪ ತೋರಿಸಲು ಅವನು ಶ್ರಮಪಡುತ್ತಾನೆ.

ADVERTISEMENT

– ಶೀತಲ್ ಭಟ್ (ಹಿರಿಯ ರಂಗಕರ್ಮಿ ಡಾ.ಶ್ರೀಪಾದ ಭಟ್ ಪುತ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.